ಹಿಮಾಚಲ ಪ್ರದೇಶದ ಮೂವರು ಪಕ್ಷೇತರ ಶಾಸಕರು ರಾಜೀನಾಮೆ ನೀಡಿದ್ದು, ಬಿಜೆಪಿಗೆ ಸೇರಿ ಉಪಚುನಾವಣೆ ಎದುರಿಸುವುದಾಗಿ ಪ್ರಕಟಿಸಿದ್ದಾರೆ.

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಈಗಾಗಲೇ ಆರು ಶಾಸಕರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಕಾಂಗ್ರೆಸ್‌ ಸರ್ಕಾರಕ್ಕೆ ಮತ್ತೊಂದು ಸಂಕಟ ಎದುರಾಗಿದೆ. 

ಸರ್ಕಾರಕ್ಕೆ ಬೆಂಬಲ ನೀಡಿದ್ದರೂ ಬಿಜೆಪಿ ಪರ ಇತ್ತೀಚೆಗೆ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದ 3 ಪಕ್ಷೇತರ ಶಾಸಕರು ರಾಜೀನಾಮೆ ನೀಡಿದ್ದಾರೆ.

ಹಮೀರ್‌ಪುರದ ಆಶಿಶ್‌ ಶರ್ಮಾ, ದೇಹ್ರಾದ ಹೋಶಿಯಾರ್‌ ಸಿಂಗ್‌ ಮತ್ತು ನಲಗಢದ ಥಾಕೂರ್‌ ರಾಜೀನಾಮೆ ನೀಡಿದ ಪಕ್ಷೇತರ ಶಾಸಕರಾಗಿದ್ದಾರೆ.

 ಈ ವೇಳೆ ಮಾತನಾಡಿದ ಹೋಶಿಯಾರ್‌ ಸಿಂಗ್‌ ತಾವೆಲ್ಲರೂ ಬಿಜೆಪಿಗೆ ಸೇರಿ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ ಎಂದು ತಿಳಿಸಿದ್ದಾರೆ.

ಇದಕ್ಕೂ ಮೊದಲು ಈ ಮೂವರು ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿದ್ದರು. ಇದರೊಂದಿಗೆ ಹಿಮಾಚಲ ವಿಧಾನಸಭಾ ಬಲ 59ಕ್ಕೆ ಕುಸಿದಿದ್ದು, ಬಿಜೆಪಿಯ 25 ಮತ್ತು ಕಾಂಗ್ರೆಸ್‌ನ 34 ಶಾಸಕರಿದ್ದಾರೆ.