ಸಾರಾಂಶ
ಕೇಂದ್ರ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯ ಭಾಗವಾಗಿ ತ್ರಿಭಾಷಾ ಸೂತ್ರದ ಮೂಲಕ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ಆರೋಪಿಸಿ, ತೀವ್ರವಾಗಿ ವಿರೋಧಿಸುತ್ತಿರುವ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಇದೀಗ ಸಂಸ್ಕೃತದ ವಿರುದ್ಧವೂ ಅದೇ ನಿಲುವನ್ನು ತಾಳಿ ಕಿಡಿಕಾರಿದ್ದಾರೆ.
ಚೆನ್ನೈ: ಇತ್ತೀಚೆಗೆ ಕೇಂದ್ರ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ) ಭಾಗವಾಗಿ ತ್ರಿಭಾಷಾ ಸೂತ್ರದ ಮೂಲಕ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ಆರೋಪಿಸಿ, ಹಿಂದಿ ಭಾಷೆ ಕಲಿಕೆ ಹಾಗೂ ಅಳವಡಿಕೆಯನ್ನು ತೀವ್ರವಾಗಿ ವಿರೋಧಿಸುತ್ತಿರುವ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಇದೀಗ ಸಂಸ್ಕೃತದ ವಿರುದ್ಧವೂ ಅದೇ ನಿಲುವನ್ನು ತಾಳಿ ಕಿಡಿಕಾರಿದ್ದಾರೆ.
‘ಹಿಂದಿ ಮುಖವಾಡವಿದ್ದಂತೆ. ಅದರ ಹಿಂದಿರುವ ಮುಖ ಸಂಸ್ಕೃತ’ ಎಂದು ಗುರುವಾರ ಹೇಳಿಕೆ ನೀಡಿರುವ ಅವರು, ‘ಬಿಹಾರ, ಉತ್ತರಪ್ರದೇಶ, ಮಧ್ಯಪ್ರದೇಶದಂತಹ ಉತ್ತರದ ರಾಜ್ಯಗಳಲ್ಲಿ ಬಳಕೆಯಲ್ಲಿರುವ ಮೈಥಿಲಿ, ಬೃಜ್‌ಭಾಷಾ, ಬುಂದೇಲ್‌ಖಂಡಿ, ಅವಧಿಗಳಂತಹ 25 ಭಾಷೆಗಳು ಹಿಂದಿ ಹಾಗೂ ಸಂಸ್ಕೃತದ ಪ್ರಾಬಲ್ಯದಿಂದಾಗಿ ನಾಶಗೊಂಡಿವೆ. ವಿವಿಧ ದ್ರಾವಿಡ ಚಳವಳಿಗಳ ಮೂಲಕ ಜಾಗೃತಿ ಮೂಡಿಸಿದ್ದರಿಂದಾಗಿ ತಮಿಳು ಹಾಗೂ ಅದರ ಸಂಸ್ಕೃತಿಯನ್ನು ಉಳಿಸಲು ಸಾಧ್ಯವಾಯಿತು. ನಾವು ಹಿಂದಿ ಹೇರಿಕೆಗೆ ಅನುವು ಮಾಡಿಕೊಡುವುದಿಲ್ಲ’ ಎಂದಿದ್ದಾರೆ.ತ್ರಿಭಾಷಾ ಸೂತ್ರದ ಬಗ್ಗೆ ಮಾತನಾಡಿದ ಸ್ಟಾಲಿನ್, ‘ಕೆಲ ರಾಜ್ಯಗಳಲ್ಲಿ ಕೇವಲ ಸಂಸ್ಕೃತವನ್ನು ಉತ್ತೇಜಿಸಲಾಗುತ್ತಿದೆ. ಬಿಜೆಪಿ ಆಳ್ವಿಕೆಯ ರಾಜಸ್ಥಾನದಲ್ಲಿ ಉರ್ದು ಬದಲಿಗೆ ಸಂಸ್ಕೃತ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ತಮಿಳುನಾಡಿನಲ್ಲಿ ಈ ಸೂತ್ರವನ್ನು ಅಳವಡಿಸಿಕೊಂಡರೆ ಅದರಿಂದ ಮಾತೃಭಾಷೆ ಕಡೆಗಣಿಸಲ್ಪಡುತ್ತದೆ ಹಾಗೂ ಭವಿಷ್ಯದಲ್ಲಿ ಸಂಸ್ಕೃತೀಕರಣವಾಗುತ್ತದೆ’ ಎಂದರು.
ಬಿಜೆಪಿ ಪ್ರತಿಕ್ರಿಯೆ:ಸ್ಟಾಲಿನ್ ಅವರ ಹಿಂದಿ ಹಾಗೂ ಸಂಸ್ಕೃತ ಹೇರಿಕೆ ಹೇಳಿಕೆಗೆ ತಕ್ಷಣ ಪ್ರತಿಕ್ರಿಯಿಸಿರುವ ಬಿಜೆಪಿ, ಅದನ್ನು ‘ಕ್ಷುಲ್ಲಕ’ ಎಂದು ಕರೆದಿದೆ.