ಸಾರಾಂಶ
ಸಾಹಿತ್ಯ ಕ್ಷೇತ್ರದ ಸಾಧಕರಿಗೆ ಕೊಡಲಾಗುವ ಅತ್ಯುನ್ನತ ಗೌರವವಾದ ಜ್ಞಾನಪೀಠ ಪ್ರಶಸ್ತಿಗೆ ಖ್ಯಾತ ಹಿಂದಿ ಸಾಹಿತಿ ವಿನೋದ್ ಕುಮಾರ್ ಶುಕ್ಲಾ ಆಯ್ಕೆಯಾಗಿದ್ದಾರೆ. ಈ ಮೂಲಕ ಜ್ಞಾನಪೀಠ ಪಡೆದ ಛತ್ತೀಸಗಢ ರಾಜ್ಯದ ಮೊದಲ ಸಾಹಿತಿ ಮತ್ತು 12ನೇ ಹಿಂದಿ ಸಾಹಿತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ನವದೆಹಲಿ: ಸಾಹಿತ್ಯ ಕ್ಷೇತ್ರದ ಸಾಧಕರಿಗೆ ಕೊಡಲಾಗುವ ಅತ್ಯುನ್ನತ ಗೌರವವಾದ ಜ್ಞಾನಪೀಠ ಪ್ರಶಸ್ತಿಗೆ ಖ್ಯಾತ ಹಿಂದಿ ಸಾಹಿತಿ ವಿನೋದ್ ಕುಮಾರ್ ಶುಕ್ಲಾ ಆಯ್ಕೆಯಾಗಿದ್ದಾರೆ. ಈ ಮೂಲಕ ಜ್ಞಾನಪೀಠ ಪಡೆದ ಛತ್ತೀಸಗಢ ರಾಜ್ಯದ ಮೊದಲ ಸಾಹಿತಿ ಮತ್ತು 12ನೇ ಹಿಂದಿ ಸಾಹಿತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಖ್ಯಾತ ಕಥೆಗಾರ್ತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತೆ ಪ್ರತಿಭಾ ರೇ ಅವರ ಅಧ್ಯಕ್ಷತೆಯಲ್ಲಿ ನಡೆದ ಜ್ಞಾನಪೀಠ ಆಯ್ಕೆ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.‘ವಿನೋದ್ ಕುಮಾರ್ ಶುಕ್ಲಾ ಅವರು ಛತ್ತೀಸ್‌ಗಢ ರಾಜ್ಯದಿಂದ ಈ ಪ್ರಶಸ್ತಿಯನ್ನು ಪಡೆದ ಮೊದಲ ಲೇಖಕರಾಗಲಿದ್ದಾರೆ. ಹಿಂದಿ ಸಾಹಿತ್ಯಕ್ಕೆ, ಸೃಜನಶೀಲತೆಗೆ ಮತ್ತು ವಿಶಿಷ್ಟ ಬರವಣಿಗೆ ಶೈಲಿಗೆ ಅವರು ನೀಡಿದ ಅತ್ಯುತ್ತಮ ಕೊಡುಗೆಗಳನ್ನು ಪರಿಗಣಿಸಿ ಈ ಗೌರವವನ್ನು ನೀಡಲಾಗುತ್ತಿದೆ’ ಎಂದು ಸಮಿತಿ ಹೇಳಿಕೆ ನೀಡಿದೆ. ಪ್ರಶಸ್ತಿಯು 11 ಲಕ್ಷ ರು. ನಗದು ಹಾಗೂ ಸರಸ್ವತಿಯ ಕಂಚಿನ ಮೂರ್ತಿಯನ್ನು ಒಳಗೊಂಡಿರುತ್ತದೆ.
88 ವರ್ಷ ವಯಸ್ಸಿನ ವಿನೋದ್ ಶುಕ್ಲಾ ಕಥೆಗಾರ, ಕವಿ ಮತ್ತು ಪ್ರಬಂಧಕಾರರಾಗಿ ಖ್ಯಾತರಾಗಿದ್ದಾರೆ. ಅವರ ‘ದೀವಾರ್ ಮೇ ಏಕ್ ಖಿರ್ಕೀ ರಹತಿ ಥಿ’ ಕೃತಿ 1999ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನವಾಗಿತ್ತು. ‘ನೌಕರ್ ಕಿ ಕಮೀಜ್’ ಕಾದಂಬರಿ (1979) ಮಣಿ ಕೌಲ್ ಅವರಿಂದ ಚಲನಚಿತ್ರವಾಗಿ ರೂಪುಗೊಂಡಿದೆ.