ಸಾರಾಂಶ
ನವದೆಹಲಿ: ಲೋಕಸಭೆಯಲ್ಲಿ ಸಂವಿಧಾನದ ಮೇಲಿನ ಚರ್ಚೆಯ ವೇಳೆ ವಿಪಕ್ಷ ನಾಯಕ ರಾಹುಲ್ ಗಾಂಧಿ ನೀಡಿದ ಏಕಲವ್ಯ ಹಾಗೂ ದ್ರೋಣಾಚಾರ್ಯರ ಉದಾಹರಣೆಗೆ ಹಲವು ಧಾರ್ಮಿಕ ನಾಯಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ರಾಹುಲ್ ಕ್ಷಮೆಯಾಚನೆಗೆ ಆವರು ಆಗ್ರಹಿಸಿದ್ದಾರೆ.
‘ಏಕಲವ್ಯ ತನ್ನ ಹೆಬ್ಬೆರಳು ಕತ್ತರಿಸಿ ದ್ರೋಣರಿಗೆ ನೀಡಿದಂತೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರ, ದೇಶದ ಜನರ ಹೆಬ್ಬೆರಳನ್ನು ಕತ್ತರಿಸುತ್ತಿದೆ’ ಎಂದು ರಾಹುಲ್ ಶನಿವಾರ ಹೇಳಿದ್ದರು.
ಅವರ ಹೇಳಿಕೆಯನ್ನು ಹರಿದ್ವಾರದ ಶ್ರೀ ಪಂಚಾಯತಿ ಅಖಾಡದ ಮಹಾಮಂಡಲೇಶ್ವರ ರೂಪೇಂದ್ರ ಪ್ರಕಾಶ್ ಮಹಾರಾಜ್ ಖಂಡಿಸಿದ್ದು, ‘ದ್ರೋಣರ ಪ್ರತಿ ತನಗಿದ್ದ ಗೌರವ, ಭಕ್ತಿಯ ಪ್ರತೀಕವಾಗಿ ಏಕಲವ್ಯ ಹೆಬ್ಬೆರಳನ್ನು ನೀಡಿದ. ಇದು ಅನ್ಯಾಯವಲ್ಲ. ಈ ಕಥೆ ಗುರು- ಶಿಷ್ಯನ ಸಂಬಂಧ ಪ್ರತಿನಿಧಿಸುತ್ತದೆ. ಆದರೆ ರಾಹುಲ್‌ರ ಹೇಳಿಕೆ ಸನಾತನ ಧರ್ಮದ ಮೇಲಿನ ದಾಳಿಯಾಗಿದ್ದು, ಅದರ ತತ್ವಗಳಿಗೆ ಮಾಡಿದ ಅವಮಾನವಾಗಿದೆ. ಇದಕ್ಕೆ ಅವರು ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು. ಇಂತಹ ಹೇಳಿಕೆ ನೀಡುವ ಮೊದಲು ರಾಮಾಯಣ, ಮಹಾಭಾರತಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು’ ಎಂದರು.
ಅಂತೆಯೇ, ‘ಪದೇ ಪದೇ ಹಿಂದೂ ಸಮುದಾಯವನ್ನು ಅವಹೇಳನ ಮಾಡುವ ರಾಹುಲ್ ಇಸ್ಲಾಂ ಬಗ್ಗೆ ಮಾತಾಡುವುದಿಲ್ಲ. ಕಾರಣ, ಅವರಿಗೆ ಮುಸ್ಲಿಂ ಸಮುದಾಯದ ಆಕ್ರೋಶಕ್ಕೆ ಗುರಿಯಾಗುವ ಭಯವಿದೆ’ ಎಂದು ಕಿಡಿಕಾರಿದರು.
ಸಂತ ಕಮಲ್ ನಯನ್ ದಾಸ್, ರಾಜು ದಾಸ್ ಸೇರಿ ಹಲವು ಸಂತರು ರಾಹುಲ್‌ರನ್ನು, ‘ಹಿಂದೂ ಹಾಗೂ ರಾಷ್ಟ್ರ ವಿರೋಧಿ’ ಎಂದು ಕರೆದಿದ್ದಾರೆ.