ಸಾರಾಂಶ
ಅಯೋಧ್ಯೆ : 1992ರಲ್ಲಿ ಧ್ವಂಸಗೊಂಡ ಬಾಬ್ರಿ ಮಸೀದಿಗೆ ಪರ್ಯಾಯವಾಗಿ ಇನ್ನೊಂದು ಮಸೀದಿ ನಿರ್ಮಾಣಕ್ಕೆ ಸುಪ್ರಿಂ ಕೋರ್ಟೇ ಖುದ್ದು ಅನುಮತಿ ನೀಡಿದ್ದರೂ, ನಿರ್ಮಾಣ ಕಾರ್ಯ ಕುಂಟುತ್ತ ಸಾಗಿದೆ. ಏಕೆಂದರೆ ಮಸೀದಿ ನಿರ್ಮಾಣಕ್ಕೆ ಸಮಿತಿ ರಚನೆ ಆದ 4 ವರ್ಷ ನಂತರ ಸಂಗ್ರಹ ಆದ ದೇಣಿಗೆ ಹಣ ಕೇವಲ 1 ಕೋಟಿ ರು. ಮಾತ್ರ.
ಆದ್ದರಿಂದ ಮಸೀದಿ ಸಮಿತಿಯು ವಿದೇಶಿ ದೇಣಿಗೆ ಸಂಗ್ರಹಿಸಲು ಯತ್ನ ಆರಂಭಿಸಿದೆ. ಇದಕ್ಕೆ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯಡಿ ಅನುಮತಿ ಅಗತ್ಯವಿದ್ದು, ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದೆ. ಅರ್ಜಿ ಮಾನ್ಯವಾದರೆ ವಿದೇಶಗಳಿಂದ ದೇಣಿಗೆ ಸಂಗ್ರಹ ಸುಲಭವಾಗಿ ಮಸೀದಿ ನಿರ್ಮಾಣ ಆರಂಭ ಆಗಲಿದೆ ಎಂಬುದು ಮಸೀದಿ ಕಮಿಟಿ ಅನಿಸಿಕೆ.
ಈ ನಡುವೆ, ಈ ಎಲ್ಲ ಪ್ರಕ್ರಿಯೆಗಳಿಗೆ ಅಡ್ಡಿ ಆಗಿದ್ದವು ಎನ್ನಲಾಗಿದ್ದ ಕಮಿಟಿಯಲ್ಲಿನ 4 ಉಪಸಮಿತಿಗಳನ್ನು ವಿಸರ್ಜಿಸಲಾಗಿದೆ. ಈ ಮೂಲಕ ದೇಣಿಗೆ ಸಂಗ್ರಹ ಚುರುಕಿಗೆ ತೀರ್ಮಾನಿಸಲಾಗಿದೆ.
ಬಾಬ್ರಿ ಮಸೀದಿಗೆ ಪರ್ಯಾಯವಾಗಿ ಅಯೋಧ್ಯೆ ಹೊರವಲಯದ ಧನ್ನಿಪುರ ಎಂಬಲ್ಲಿ ಹೊಸ ಮಸೀದಿ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿತ್ತು. ಅತ್ತ ಬಾಬ್ರಿ ಮಸೀದಿ ಇದ್ದ ಜಾಗದಲ್ಲಿ ರಾಮಂದಿರ ತಲೆಯೆತ್ತಿ, ರಾಮನ ಪ್ರತಿಷ್ಠಾಪನೆ ಪೂರ್ಣಗೊಂಡರೂ ಮಸೀದಿ ನಿರ್ಮಾಣ ಕುಂಟುತ್ತ ಸಾಗಿದೆ.