ಸಾರಾಂಶ
ನವದೆಹಲಿ: ಶೀತಜ್ವರ (ಐಎಲ್‌ಐ) ಮತ್ತು ಸಾರಿ (ಎಸ್‌ಎಆರ್‌ಐ)ಯಂಥ ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಗಳ ಕುರಿತು ನಿಗಾ ಇಡುವ ವ್ಯವಸ್ಥೆ ರೂಪಿಸುವಂತೆ ಮತ್ತು ಎಚ್‌ಎಂಪಿವಿ ಹರಡದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರವು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.
ಚೀನಾದಲ್ಲಿ ಎಚ್‌ಎಂಪಿವಿ(ಹ್ಯೂಮನ್ ಮೆಟಾ ನ್ಯೂರೋ ವೈರಸ್) ಪ್ರಕರಣಗಳು ಹೆಚ್ಚಾಗುತ್ತಿರುವುದು ಮತ್ತು ಕರ್ನಾಟಕ, ತಮಿಳುನಾಡು ಮತ್ತು ಗುಜರಾತ್‌ನಲ್ಲಿ ಇಂಥ ಐದು ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇಂಥದ್ದೊಂದು ಸೂಚನೆ ನೀಡಿದೆ.
ಕೇಂದ್ರ ಆರೋಗ್ಯ ಕಾರ್ಯದರ್ಶಿ ಪುಣ್ಯ ಸಲಿಯಾ ಶ್ರೀವಾಸ್ತವ ಅವರು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಜತೆಗೆ ಸೋಮವಾರ ವರ್ಚುವಲ್ ಆಗಿ ನಡೆಸಿದ ಸಭೆಯಲ್ಲಿ ಎಚ್‌ಎಂಪಿವಿ ಪ್ರಕರಣಗಳ ಆತಂಕದ ಹಿನ್ನೆಲೆಯಲ್ಲಿ ಸಾರ್ವಜನಿಕ ಆರೋಗ್ಯ ಸುರಕ್ಷಾ ವ್ಯವಸ್ಥೆಗಳ ಕುರಿತು ಮಾಹಿತಿಯನ್ನು ಪಡೆದರು ಮತ್ತು ಇಂಥ ಸಾಂಕ್ರಾಮಿಕ ರೋಗಗಳನ್ನು ತಡೆಯುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಮಾಲೋಚನೆ ನಡೆಸಿದರು ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ಸಭೆಯಲ್ಲಿ ಕೇಂದ್ರ ಆರೋಗ್ಯ ಸಂಶೋಧನಾ ಇಲಾಖೆ ಕಾರ್ಯದರ್ಶಿ ಡಾ.ರಾಜೀವ್ ಬಹಲ್, ಆರೋಗ್ಯ ಸೇವೆಗಳ ಮಹಾ ನಿರ್ದೇಶಕ ಡಾ.ಅತುಲ್ ಗೋಯಲ್ ಮತ್ತು ಕೇಂದ್ರೀಯ ರೋಗ ನಿಯಂತ್ರಣ ಕೇಂದ್ರ(ಎನ್‌ಸಿಡಿಸಿ), ಸಮಗ್ರ ರೋಗ ನಿಗಾ ಕಾರ್ಯಕ್ರಮಗಳು(ಐಡಿಎಸ್‌ಪಿ), ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್(ಐಸಿಎಂಆರ್), ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ವೈರಾಲಜಿ(ಎನ್ಐವಿ)ಯ ತಜ್ಞರು ಮತ್ತು ಐಡಿಎಸ್‌ಪಿಯ ರಾಜ್ಯ ಘಟಕಗಳು ಸಭೆಯಲ್ಲಿ ಪಾಲ್ಗೊಂಡಿದ್ದವು.
ಎಚ್‌ಎಂಪಿವಿಯು ಅಂತಾರಾಷ್ಟ್ರೀಯಮಟ್ಟದಲ್ಲಿ ತನ್ನ ಉಪಸ್ಥಿತಿಯನ್ನು ತೋರಿಸಿಕೊಟ್ಟಿರುವ ಉಸಿರಾಟಕ್ಕೆ ಸಂಬಂಧಿಸಿದ ವೈರಸ್ ಆಗಿದೆ. ಇದೊಂದು ವೈರಲ್ ರೋಗಕಾರವಾಗಿದ್ದು, ಎಲ್ಲಾ ವಯೋಮಾನದ ಜನರಲ್ಲೂ ಉಸಿರಾಟಕ್ಕೆ ಸಂಬಂಧಿಸಿದ ಸೋಂಕಿಗೆ ಕಾರಣವಾಗುತ್ತದೆ. ಸದ್ಯ ಐಡಿಎಸ್ಪಿಯಿಂದ ಪಡೆದ ಅಂಕಿ-ಅಂಶಗಳ ಪ್ರಕಾರ ದೇಶದ ಯಾವುದೇ ಭಾಗದಲ್ಲಿ ಐಎಲ್‌ಐ ಮತ್ತು ಸಾರಿ ಪ್ರಕರಣಗಳು ಅಸಮಾನ್ಯ ರೀತಿಯಲ್ಲಿ ಹೆಚ್ಚಾಗಿರುವ ಕುರಿತು ತಿಳಿದುಬಂದಿಲ್ಲ ಎಂದು ಹೇಳಿಕೆ ತಿಳಿಸಿದೆ.
ಆತಂಕ ಬೇಡ:
ಎಚ್‌ಎಂಪಿವಿ ಕುರಿತು ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ, ಇದು ಹೊಸ ಸೋಂಕೇನಲ್ಲ. 2001ರಿಂದಲೂ ವಿದೇಶಗಳಲ್ಲಿ ಇದು ಕಾಣಿಸಿಕೊಳ್ಳುತ್ತಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ಶ್ರೀವಾಸ್ತವ ತಿಳಿಸಿದ್ದು, ಇಂಥ ಸೋಂಕುಗಳನ್ನು ತಡೆಯಲು ಐಎಲ್‌ಐ ಮತ್ತು ಸಾರಿ ಪ್ರಕರಣಗಳ ಮೇಲಿನ ನಿಗಾ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವಿದೆ ಎಂದು ಸಲಹೆ ನೀಡಿದರು.
ಮಾಹಿತಿ, ಶಿಕ್ಷಣ ಮತ್ತು ಸಂವಹನ ಮತ್ತು ಜಾಗೃತಿ ಮೂಲಕ ಎಚ್‌ಎಂಪಿವಿ ವೈರಸ್ ಹರಡುವಿಕೆ ತಡೆಯಲು ಕ್ರಮ ಕೈಗೊಳ್ಳಬೇಕು. ಸಾಬೂನು ನೀರಿನಿಂದ ಪದೇ ಪದೆ ಕೈ ತೊಳೆಯುವುದು, ಶುಚಿಯಾಗಿರದ ಕೈಗಳಿಂದ ಕಣ್ಣು, ಮೂಗು ಮತ್ತು ಬಾಯಿ ಮುಟ್ಟದಿರುವುದು, ಕೆಮ್ಮು, ಶೀತದಂಥ ಲಕ್ಷಣಗಳಿರುವ ವ್ಯಕ್ತಿಗಳೊಂದಿಗೆ ಅಂತರ ಕಾಯ್ದುಕೊಳ್ಳುವುದು, ಸೀನುವಾಗ, ಕೆಮ್ಮುವಾಗ ಬಾಯಿ, ಮೂಗು ಮುಚ್ಚಿಕೊಳ್ಳುವಂಥ ಸರಳ ಮುನ್ನೆಚ್ಚರಿಕಾ ಕ್ರಮಗಳಿಂದ ಈ ಸೋಂಕು ಹರಡುವುದನ್ನು ತಡೆಯಬಹುದು ಎಂದು ಸಲಹೆ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ 2 ಶಂಕಿತ ಎಚ್‌ಎಂಪಿವಿ ಕೇಸು
ನಾಗಪುರ : ದೇಶದ ಹಲವೆಡೆ ಎಚ್ಎಂಪಿವಿ ಸೋಂಕಿನ ವರದಿ ಬೆನ್ನಲ್ಲೇ ಮಹಾರಾಷ್ಟ್ರದ ನಾಗ್ಪುರದಲ್ಲಿ 2 ಹೊಸ ಶಂಕಿತ ಎಚ್‌ಎಂಪಿವಿ ಪ್ರಕರಣಗಳು ವರದಿಯಾಗಿವೆ.
‘ಶಂಕಿತ ಸೋಂಕಿತರು 7 ಹಾಗೂ 14 ವರ್ಷದ ಬಾಲಕರಾಗಿದ್ದು, ಅವರಿಗೆ ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗಿದೆ ಹಾಗೂ ಚೇತರಿಸಿಕೊಂಡ ನಂತರ ಇಬ್ಬರೂ ರೋಗಿಗಳನ್ನು ಮನೆಗೆ ಕಳಿಸಲಾಗಿದೆ. ಅವರ ಮಾದರಿಗಳನ್ನು ಸಂಗ್ರಹಿಸಿ ದಿಲ್ಲಿಯ ಏಮ್ಸ್ ವೈರಾಲಜಿಗೆ ಕಳುಹಿಸಲಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.ಜಿಲ್ಲಾಧಿಕಾರಿ ವಿಪಿನ್ ಇಟನ್ಕರ್ ಮಾತನಾಡಿ, ‘2 ಸೋಂಕು ಕೇಸುಗಳು ಧೃಢಪಟ್ಟಿವೆ ಎಂಬ ವರದಿಗಳು ಸುಳ್ಳು. ಇವು ಶಂಕಿತ ಪ್ರಕರಣ ಮಾತ್ರ. ಖಾಸಗಿ ಪ್ರಯೋಗಾಲಯವೊಂದು ಈ ವಿವರಗಳನ್ನು ಬಿಡುಗಡೆ ಮಾಡಿದ್ದರಿಂದ ಗೊಂದಲ ಆಗಿತ್ತು’ ಎಂದು ಸ್ಪಷ್ಟಪಡಿಸಿದ್ದಾರೆ.