ಉತ್ತರ ಭಾರತ ಸೇರಿ ದೇಶಾದ್ಯಂತ ಶಾಂತಿಯುತ ಹೋಳಿ ಆಚರಣೆ : ಸಮಾಧಾನದ ನಿಟ್ಟುಸಿರು

| N/A | Published : Mar 15 2025, 01:03 AM IST / Updated: Mar 15 2025, 05:08 AM IST

ಸಾರಾಂಶ

ಉತ್ತರ ಪ್ರದೇಶ, ದಿಲ್ಲಿ, ಬಿಹಾರ, ಮಹಾರಾಷ್ಟ್ರ ಹಾಗೂ ಉತ್ತರ ಭಾರತದ ವಿವಿಧ ಕಡೆ ಶುಕ್ರವಾರ ಬಹುತೇಕ ಶಾಂತಿಯುತ ಹೋಳಿ ಆಚರಣೆ ನಡೆದಿದೆ. ಅಹಿತಕರ ಘಟನೆಗಳು ಸಂಭವಿಸಿದ ಕಾರಣ ದೇಶ ಸಮಾಧಾನದ ನಿಟ್ಟುಸಿರು ಬಿಟ್ಟಿದೆ.

ನವದೆಹಲಿ/ಲಖನೌ/ಸಂಭಲ್: ಉತ್ತರ ಪ್ರದೇಶ, ದಿಲ್ಲಿ, ಬಿಹಾರ, ಮಹಾರಾಷ್ಟ್ರ ಹಾಗೂ ಉತ್ತರ ಭಾರತದ ವಿವಿಧ ಕಡೆ ಶುಕ್ರವಾರ ಬಹುತೇಕ ಶಾಂತಿಯುತ ಹೋಳಿ ಆಚರಣೆ ನಡೆದಿದೆ. ಅಹಿತಕರ ಘಟನೆಗಳು ಸಂಭವಿಸಿದ ಕಾರಣ ದೇಶ ಸಮಾಧಾನದ ನಿಟ್ಟುಸಿರು ಬಿಟ್ಟಿದೆ.

ಶುಕ್ರವಾರದ ಜುಮ್ಮಾ ಪ್ರಾರ್ಥನೆ ದಿನ ಹೋಳಿ ಹಬ್ಬ ಬಂದಿದ್ದರಿಂದ ಕೆಲವೆಡೆ ಕೋಮು ಸಂಘರ್ಷ ಉಂಟಾಗಬಹುದು ಎಂಬ ಆತಂಕವಿತ್ತು. ಆದರೆ ಶುಕ್ರವಾರದ ಪ್ರಾರ್ಥನೆ ಹಾಗೂ ಹೋಳಿ ಹಬ್ಬ ಯಾವುದೇ ಸಂಘರ್ಷವಿಲ್ಲದೇ ದೇಶದೆಲ್ಲೆಡೆ ಶಾಂತಿಯುತವಾಗಿ ನಡೆದವು.

ಸಂಭಲ್‌ ಶಾಂತ:

ಮಸೀದಿ-ಮಂದಿರ ಸಂಘರ್ಷದ ಕಾರಣ ಕಳೆದ ನವೆಂಬರ್‌ನಿಂದ ಸುದ್ದಿಯಲ್ಲಿರುವ ಉತ್ತರ ಪ್ರದೇಶದ ಸಂಭಲ್‌ನಲ್ಲಿ ಬಣ್ಣದಾಟ ಬಿಗಿ ಬಂದೋಬಸ್ತ್‌ನಿನಲ್ಲಿ ಸಾಂಗವಾಗಿ ನಡೆಯಿತು.  ಪೊಲೀಸ್‌, ಡ್ರೋನ್ ಕಣ್ಗಾವಲನ್ನು ಇರಿಸಲಾಗಿತ್ತು. ಹೋಳಿ ಭಾಗವಾಗಿ ಸಾಂಪ್ರದಾಯಿಕ ಮೆರವಣಿಗೆಯನ್ನು ಕೂಡ ನಡೆಸಲಾಯಿತು. ಜಿಲ್ಲೆಯ ಸುಮಾರು 1200 ಕ್ಕೂ ಹೆಚ್ಚಿನ ಪ್ರದೇಶಗಳಲ್ಲಿ ಜನರು ಬಣ್ಣಗಳ ಹಬ್ಬವನ್ನು ಸಂಭ್ರಮಿಸಿದರು. ಇನ್ನು ಮುಸ್ಲಿಮರು ಶುಕ್ರವಾರ ಜುಮ್ಮಾ ಪ್ರಾರ್ಥನೆಯನ್ನು ಮಧ್ಯಾಹ್ನ 2.30 ಗಂಟೆ ಬಳಿಕ ನಡೆಸುವ ಮೂಲಕ ಹೋಳಿ ಆಚರಣೆಗೆ ಸಹಕಾರ ನೀಡಿದರು.

ಕೇವಲ ಸಂಭಲ್ ಮಾತ್ರವಲ್ಲ, ದಿಲ್ಲಿ, ಬಿಹಾರದ ಪಟನಾ ಸೇರಿ ಅನೇಕ ನಗರಗಳು, ಮಹಾರಾಷ್ಟ್ರದ ವಿವಿಧ ನಗರಗಳು, ತೆಲಂಗಾಣ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಹರ್ಯಾಣ, ಗೋವಾ ಹಾಗೂ ಉತ್ತರ ಪ್ರದೇಶದ ವಾರಾಣಸಿ, ಲಖನೌ, ಅಯೋಧ್ಯೆಯಲ್ಲಿಯೂ ಹೋಳಿ ಸಂಭ್ರಮದಿಂದ ನಡೆಯಿತು.ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶಾಂತಿಯುತವಾಗಿ ಹೋಳಿಯನ್ನು ಆಚರಿಸಲಾಯಿತು. ಇಲ್ಲಿ ಸುಮಾರು 25 ಸಾವಿರ ಪೊಲೀಸ್‌ ಸಿಬ್ಬಂದಿಯ ಬಂದೋಬಸ್ತ್‌ , 300 ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟೀವಿ ಮತ್ತು ಡ್ರೋನ್ ಕಣ್ಗಾವಲಿನಲ್ಲಿ ಹೋಳಿ ಆಚರಣೆ ನಡೆಯಿತು.