ಸಾರಾಂಶ
ನವದೆಹಲಿ: ಕೇಂದ್ರ ಸರ್ಕಾರ ಶನಿವಾರ ಪ್ರಕಟಿಸಿದ ಬಜೆಟ್‌ನಲ್ಲಿ ಹೊಸ ತೆರಿಗೆ ಪದ್ಧತಿ ಅನ್ವಯ ವಾರ್ಷಿಕ 12 ಲಕ್ಷ ರು.ವರೆಗಿನ ಆದಾಯದವರಿಗೆ ಯಾವುದೇ ತೆರಿಗೆ ಇಲ್ಲ ಎಂದು ಘೋಷಿಸಿದೆ. ಆದರೆ ಆದಾಯ 12 ಲಕ್ಷ ರು. ದಾಟಿದರೆ ಶೇ.15ರ ತೆರಿಗೆ ವ್ಯಾಪ್ತಿಗೆ ಒಳಪಡಬೇಕಾಗುತ್ತದೆ.
ಹೊಸ ತೆರಿಗೆ ಪದ್ಧತಿಯ ಇನ್ನೊಂದು ವಿಶೇಷವೆಂದರೆ ಇಲ್ಲಿ ವೇತನದಾರರು ಯಾವುದೇ ರಿಯಾಯ್ತಿ, ವಿನಾಯ್ತಿ ಕೇಳುವಂತಿಲ್ಲ,ಆದರೆ ಈ ನಿಯಮದ ಹೊರತಾಗಿಯೂ ಕೇಂದ್ರ ಸರ್ಕಾರ ತೆರಿಗೆ ವೇತನದಾರರಿಗೆ 2 ಅವಕಾಶಗಳನ್ನು ನೀಡಿದೆ. ಅವುಗಳನ್ನು ಬಳಸಿಕೊಂಡು ವಾರ್ಷಿಕ ಆದಾಯ 12 ಲಕ್ಷ ದಾಟಿದರೂ ತೆರಿಗೆ ಪಾವತಿ ತಪ್ಪಿಸಿಕೊಳ್ಳಬಹುದು.
ಮೊದಲ ಅವಕಾಶ:ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ವಯ ಯಾವುದೇ ವೇತನದಾರರ 75000 ರು. ಗಳ ವಿನಾಯ್ತಿ ಪಡೆಯಲು ಅರ್ಹ. ಇದನ್ನ ಬಳಸಿಕೊಂಡರೆ, ವಾರ್ಷಿಕ ಆದಾಯ 127500ಕ್ಕೆ ತಲುಪಿದರೂ ತೆರಿಗೆ ಪಾವತಿಯಿಂದ ಪಾರಾಗಬಹುದು.
2ನೇ ಅವಕಾಶ:ಇನ್ನು ಎರಡನೇ ಅವಕಾಶ ಎನ್‌ಪಿಎಸ್‌ನದ್ದು. ಈ ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ಒಂದು ವೇಳೆ ವೇತನದಾರರು ತಮ್ಮ ವೇತನದಿಂದ ಪಿಂಚಣಿ ಯೋಜನೆಗೆ ಹಣ ಪಾವತಿ ಮಾಡುತ್ತಿದ್ದರೆ ಆ ಹಣವನ್ನು ಆದಾಯದಿಂದ ಕಡಿತ ಮಾಡಬಹುದು. ಆದರೆ ಇಲ್ಲಿ ಗ್ರಾಹಕರು ವಾರ್ಷಿಕ ಪಾವತಿ ಮಾಡುವ ಮೊತ್ತಕ್ಕೆ ಮಿತಿ ಇದೆ. ಆ ಮಿತಿಯೊಳಗಿನ ಪೂರ್ಣ ಮೊತ್ತವನ್ನೂ ಆದಾಯದಲ್ಲಿ ಕಡಿತ ಮಾಡುವ ಅವಕಾಶವಿದೆ.
ಹೀಗೆ ಎರಡೂ ಅವಕಾಶವನ್ನು ಬಳಸಿಕೊಂಡು ವೇತನದಾರರು ತಮ್ಮ ಆದಾಯದ ಮಿತಿಯನ್ನು 12 ಲಕ್ಷ ರು.ನೊಳಗೇ ಇರಿಸಿಕೊಂಡು ತೆರಿಗೆ ಪಾವತಿಯಿಂದ ಬಚಾವ್ ಆಗಬಹುದು.