ವಿವಿಧ ವಿಧಗಳ ಪಾಪ್‌ಕಾರ್ನ್‌ಗಳ ಮೇಲೆ ಪ್ರತ್ಯೇಕ ಸರಕು-ಸೇವಾ ತೆರಿಗೆ : ವ್ಯಾಪಕ ಆಕ್ರೋಶ

| Published : Dec 24 2024, 12:48 AM IST / Updated: Dec 24 2024, 03:38 AM IST

ಸಾರಾಂಶ

ವಿವಿಧ ವಿಧಗಳ ಪಾಪ್‌ಕಾರ್ನ್‌ಗಳ ಮೇಲೆ ಪ್ರತ್ಯೇಕ ಸರಕು-ಸೇವಾ ತೆರಿಗೆಗಳನ್ನು (ಜಿಎಸ್ಟಿ) ಹೇರಿದ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಇದೀಗ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.

ನವದೆಹಲಿ: ವಿವಿಧ ವಿಧಗಳ ಪಾಪ್‌ಕಾರ್ನ್‌ಗಳ ಮೇಲೆ ಪ್ರತ್ಯೇಕ ಸರಕು-ಸೇವಾ ತೆರಿಗೆಗಳನ್ನು (ಜಿಎಸ್ಟಿ) ಹೇರಿದ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಇದೀಗ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.

ಕೇವಲ ಉಪ್ಪು ಹಾಗೂ ಮಸಾಲೆ ಬೆರೆಸಿದ ಪಾಪ್‌ಕಾರ್ನ್‌ ಮೇಲೆ ಶೇ.5ರಷ್ಟು, ಪ್ಯಾಕ್‌ ಮಾಡಿದ ಹಾಗೂ ಬ್ರ್ಯಾಂಡೆಡ್‌ ಪಾಪ್‌ಕಾರ್ನ್‌ ಮೇಲೆ ಶೇ.12ರಷ್ಟು ಹಾಗೂ ಮಿಠಾಯಿ ಎಂದು ಪರಿಗಣಿಸಲಾದ ಕ್ಯಾರಮೆಲ್‌ ಪಾಪ್‌ಕಾರ್ನ್‌ಗೆ ಶೇ.18ರಷ್ಟು ತೆರಿಗೆ ವಿಧಿಸುವ ಬಗ್ಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ನೇತೃತ್ವದ ಜಿಎಸ್‌ಟಿ ಕೌನ್ಸಿಲ್‌ ಶನಿವಾರ ಘೋಷಿಸಿದ್ದರು.

ವಿರೋಧ:

ಇದಕ್ಕೆ ವಿಪಕ್ಷದ ನಾಯಕರು, ಅರ್ಥಶಾಸ್ತ್ರಜ್ಞರು ಹಾಗೂ ಕೆಲ ಕೇಂದ್ರ ಸರ್ಕಾರದ ಬೆಂಬಲಿಗರಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗಿದೆ.

‘ಕ್ಲಿಷ್ಟತೆಯು ಸರ್ಕಾರಕ್ಕೆ ಆನಂದ ತಂದರೆ, ನಾಗರಿಕರಿಗೆ ದುಃಸ್ವಪ್ನವಿದ್ದಂತೆ’ ಎಂದು ಮಾಜಿ ಆರ್ಥಿಕ ಸಲಹೆಗಾರ ಕೆ.ವಿ. ಸುಬ್ರಹ್ಮನಿಯನ್‌ ಎಕ್ಸ್‌ನಲ್ಲಿ ಬರೆದಿದ್ದಾರೆ. ಜತೆಗೆ, ಈ ತೆರಿಗೆ ಪದ್ಧತಿಯ ತರ್ಕಬದ್ಧತೆಯನ್ನು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್‌ ವಕ್ತಾರ ಜೈರಾಂ ರಮೇಶ್‌ ಮಾತನಾಡಿ, ‘ಹೀಗೆ ಮಾಡುವ ಮೂಲಕ ಒಳ್ಳೆಯ ಹಾಗೂ ಸರಳ ತೆರಿಗೆ ಪದ್ಧತಿಯನ್ನು ಕಠಿಣವಾಗಿಸಲಾಗುತ್ತಿದೆ’ ಎಂದಿದ್ದಾರೆ.

ಉದ್ಯಮಿಗಳ ಆಕ್ರೋಶ:

ಪಾಪ್‌ಕಾರ್ನ್‌ ಮೇಲಿನ ತೆರಿಗೆ ಹಾಗೂ ನಾವೀನ್ಯತೆಯ ಉಸಿರುಗಟ್ಟುವಿಕೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಉದ್ಯಮಿಯೊಬ್ಬರು, ತಾರತಮ್ಯ, ಪ್ರಾದೇಶಿಕ ದ್ವೇಷ, ಕಾನೂನು ಬಳಸಿ ಉದ್ಯಮಗಳನ್ನು ಸತಾಯಿಸುವುದು, ವಿಪರೀತ ತೆರಿಗೆಯಂತಹ ಸಮಸ್ಯೆಗಳನ್ನು ಉಲ್ಲೇಖಿಸಿ, ‘ಒಳ್ಳೆ ಆದಾಯ ಗಳಿಸುತ್ತಿರುವವರಿಗೆ ದೇಶ ಬಿಡಬೇಕು’ ಎಂಬ ಸಲಹೆ ನೀಡಿದ್ದಾರೆ.