ಪಿಒಕೆಯಲ್ಲಿ ಪಾಕ್‌ ವಿರುದ್ಧ ಭಾರಿ ಹಿಂಸಾತ್ಮಕ ಪ್ರತಿಭಟನೆ

| Published : May 12 2024, 01:15 AM IST / Updated: May 12 2024, 07:52 AM IST

ಪಿಒಕೆಯಲ್ಲಿ ಪಾಕ್‌ ವಿರುದ್ಧ ಭಾರಿ ಹಿಂಸಾತ್ಮಕ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಪಾಕಿಸ್ತಾನ ಸರ್ಕಾರದ ತೆರಿಗೆ ಏರಿಕೆ, ಬೆಲೆ ಏರಿಕೆ ಹಾಗೂ ಇತರ ತಾರತಮ್ಯ ನೀತಿ ವಿರೋಧಿಸಿ ಪಾಕ್‌ ಆಕ್ರಮಿತ ಕಾಶ್ಮೀರದ ಜನರು ನಡೆಸುತ್ತಿರುವ ಪ್ರತಿಭಟನೆ ಎರಡನೇ ದಿನವಾದ ಶನಿವಾರ ಕೂಡಾ ಮುಂದುವರೆದಿದೆ.

ನವದೆಹಲಿ: ಪಾಕಿಸ್ತಾನ ಸರ್ಕಾರದ ತೆರಿಗೆ ಏರಿಕೆ, ಬೆಲೆ ಏರಿಕೆ ಹಾಗೂ ಇತರ ತಾರತಮ್ಯ ನೀತಿ ವಿರೋಧಿಸಿ ಪಾಕ್‌ ಆಕ್ರಮಿತ ಕಾಶ್ಮೀರದ ಜನರು ನಡೆಸುತ್ತಿರುವ ಪ್ರತಿಭಟನೆ ಎರಡನೇ ದಿನವಾದ ಶನಿವಾರ ಕೂಡಾ ಮುಂದುವರೆದಿದೆ. ಪ್ರತಿಭಟನಾಕಾರರು ಸ್ವಾತಂತ್ರ್ಯದ ಪರ ಘೋಷಣೆ ಕೂಗಿದ್ದಲ್ಲದೇ, ಭಾರತದ ರಾಷ್ಟ್ರಧ್ವಜ ಪ್ರದರ್ಶಿಸುವ ಮೂಲಕ ಪಾಕ್‌ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ.ಭಾರೀ ಹಣದುಬ್ಬರ, ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ, ಸ್ಥಳೀಯರಿಗೆ ಹೆಚ್ಚಿನ ತೆರಿಗೆ ಮೊದಲಾದ ವಿಷಯ ಮುಂದಿಟ್ಟುಕೊಂಡು ಪಾಕ್‌ ಆಕ್ರಮಿತ ಕಾಶ್ಮೀರದ ಜನರು ಮೇ 10 ಹಾಗೂ 11ಕ್ಕೆ ಪ್ರತಿಭಟನೆಗೆ ಕರೆ ಕೊಟ್ಟಿದ್ದರು. ಅದರ ಭಾಗವಾಗಿ ಶುಕ್ರವಾರದಿಂದಲೇ ಜನರು ಬೀದಿಗಿಳಿದು ಹೋರಾಟ ಆರಂಭಿಸಿದ್ದರು. ಶನಿವಾರವೂ ಪ್ರತಿಭಟನೆ ಮುಂದುವರಿದು, ಪಿಒಕೆ ಸಂಪೂರ್ಣ ಸ್ತಬ್ಧವಾಗಿತ್ತು.

ಹಿಂಸಾಚಾರ, ಗುಂಡೇಟು : ಪ್ರತಿಭಟನಾಕಾರರು ಶಾಂತಿಯುತವಾಗಿಯೇ ಪ್ರತಿಭಟನೆ ನಡೆಸಿದ್ದರಾದರೂ, ಪ್ರತಿಭಟನೆ ಹತ್ತಿಕ್ಕಲು ಪಾಕ್‌ ಸರ್ಕಾರ ಮಾರಕ ತಂತ್ರಗಳನ್ನು ಬಳಸಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಸಾರೂಪ ಪಡೆದಿದೆ. ಈ ವೇಳೆ ಪ್ರತಿಭಟನಾಕಾರರು ಮತ್ತು ಸೇನೆ ನಡುವೆ ಭಾರೀ ಹೊಯ್‌ಕೈ ನಡೆದಿದೆ. ಯೋಧರನ್ನು ಪ್ರತಿಭಟನಾಕಾರರು ಥಳಿಸಿದ ಘಟನೆಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಮತ್ತೊಂದೆಡೆ ಯೋಧರು ಕೂಡಾ ಪ್ರತಿಭಟನಾಕಾರರ ಮೇಲೆ ಅಶ್ರುವಾಯು, ಪೆಲ್ಲೆಟ್‌ ಗನ್‌ ಬಳಸಿ ದಾಳಿ ನಡೆಸಿದ್ದಾರೆ. ಜೊತೆಗೆ ಎಕೆ 47 ಗನ್‌ ಬಳಸಿ ದಾಳಿ ನಡೆಸಿರುವ ದೃಶ್ಯಗಳು ಕೂಡಾ ಜಾಲತಾಣದಲ್ಲಿ ಹರಿದಾಡುತ್ತಿದೆ. ಪೊಲೀಸರು ನಡೆಸಿದ ದಾಳಿ ವೇಳೆ ಇಬ್ಬರು ಪ್ರತಿಭಟನಾಕಾರರು ಸಾವನ್ನಪ್ಪಿದ್ದಾರೆ.

ಪ್ರತಿಭಟನೆ ಏಕೆ?:  ಪಾಕಿಸ್ತಾನದಲ್ಲಿ ಹಣದುಬ್ಬರ ಮಿತಿಮೀರಿದ್ದು ಜನರು ಜೀವನ ಸಾಗಿಸುವುದೇ ಕಷ್ಟಕರವಾಗಿದೆ. ಇದನ್ನು ತಡೆಯಲು ಪಾಕ್‌ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಜೊತೆಗೆ ಪಿಒಕೆಯಲ್ಲಿ ಉತ್ಪಾದಿಸಿದ ವಿದ್ಯುತ್‌ ಅನ್ನು ಪಾಕಿಸ್ತಾನದ ಪ್ರಮುಖ ನಗರಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಆದರೆ ಸ್ಥಳೀಯರಿಗೆ ವಿದ್ಯುತ್‌ ಪೂರೈಕೆಯಲ್ಲಿ ಭಾರೀ ಕಡಿತ ಮಾಡಲಾಗುತ್ತಿದೆ. ಇನ್ನೊಂದೆಡೆ ಸ್ಥಳೀಯರ ಮೇಲೆ ಪಾಕ್ ಸರ್ಕಾರ ಹೆಚ್ಚಿನ ತೆರಿಗೆ ವಿಧಿಸುತ್ತಿರುವುದರ ವಿರುದ್ಧವೂ ಜನರು ಆಕ್ರೋಶಗೊಂಡಿದ್ದಾರೆ. ಇದೇ ವಿಷಯಕ್ಕೆ ಕಳೆದ ಆಗಸ್ಟ್‌ನಲ್ಲೂ ಜನರು ಬೀದಿಗಿಳಿದು ಹೋರಾಡಿದ್ದರು. ಆದರೆ ಸಮಸ್ಯೆ ಇತ್ಯರ್ಥವಾಗದ ಹಿನ್ನೆಲೆಯಲ್ಲಿ ಮತ್ತೆ ಬೀದಿಗಿಳಿದಿದ್ದಾರೆ.