ಸಾರಾಂಶ
ನವದೆಹಲಿ : ದೇಶದಲ್ಲಿ ಭ್ರಷ್ಟಾಚಾರದ ವಿರುದ್ಧದ ಸಮರವನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಘೋಷಿಸಿರುವ ಪ್ರಧಾನಿ ನರೇಂದ್ರ ಮೋದಿ, ತನಿಖಾ ಸಂಸ್ಥೆಗಳಿಗೆ ಎನ್‌ಡಿಎ ಸರ್ಕಾರ ಭ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳಲು ಸಂಪೂರ್ಣ ಸ್ವಾತಂತ್ರ್ಯ ನೀಡಿದೆ ಎಂದು ಹೇಳಿದ್ದಾರೆ.
ಇದೇ ವೇಳೆ, ಕಾಂಗ್ರೆಸ್ ವಿರುದ್ಧ ತೀವ್ರವಾಗಿ ಹರಿಹಾಯ್ದಿರುವ ಅವರು, ‘ಆಮ್ ಆದ್ಮಿ ಪಕ್ಷ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಮೊದಲು ಕಾಂಗ್ರೆಸ್ ಪಕ್ಷವೇ ಸಾಕಷ್ಟು ಬಾರಿ ಆರೋಪ ಮಾಡಿ ದಾಖಲೆಗಳನ್ನು ಬಿಡುಗಡೆ ಮಾಡಿತ್ತು. ಆದರೆ, ನಾವು ಆಪ್ ವಿರುದ್ಧ ಕ್ರಮ ಕೈಗೊಂಡಾಗ ಮೋದಿಯನ್ನು ಬೈಯುತ್ತಿದೆ. ಈಗ ಆಪ್ ಜೊತೆಗೇ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದೆ’ ಎಂದೂ ಆರೋಪಿಸಿದ್ದಾರೆ.
ರಾಜ್ಯಸಭೆಯಲ್ಲಿ ಮೋದಿ ವಾಗ್ದಾಳಿ:
ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ರಾಜ್ಯಸಭೆಯಲ್ಲಿ ಬುಧವಾರ ಉತ್ತರಿಸಿದ ಪ್ರಧಾನಿ, ‘ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳುವುದು ಎನ್‌ಡಿಎ ಸರ್ಕಾರಕ್ಕೆ ಚುನಾವಣಾ ಲಾಭದ ಪ್ರಶ್ನೆಯಲ್ಲ. ಇದು ನಮ್ಮ ಮಿಷನ್. ನಾವು ತನಿಖಾ ಸಂಸ್ಥೆಗಳಿಗೆ ಭ್ರಷ್ಟರು ಮತ್ತು ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ. ಸರ್ಕಾರ ಯಾವುದರಲ್ಲೂ ಮೂಗು ತೂರಿಸುವುದಿಲ್ಲ. ಭ್ರಷ್ಟಾಚಾರದಲ್ಲಿ ತೊಡಗಿರುವ ಯಾರೂ ತಪ್ಪಿಸಿಕೊಳ್ಳಲು ಬಿಡುವುದಿಲ್ಲ. ಇದು ಮೋದಿಯ ಗ್ಯಾರಂಟಿ’ ಎಂದು ಹೇಳಿದರು.
ಯುಪಿಎ ಮೇಲೆ ಮುಲಾಯಂ ಕಿಡಿ:
ಇದೇ ವೇಳೆ, ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ವಿಪಕ್ಷಗಳ ಆರೋಪಕ್ಕೆ ಉತ್ತರಿಸಿದ ಪ್ರಧಾನಿ, ‘ಹಿಂದೆ ಯುಪಿಎ ಸರ್ಕಾರ ಇ.ಡಿ. ಹಾಗೂ ಸಿಬಿಐಯನ್ನು ತಮ್ಮ ವಿರುದ್ಧ ಛೂ ಬಿಡುತ್ತಿದೆ ಎಂದು ದಿ.ಮುಲಾಯಂ ಸಿಂಗ್ ಯಾದವ್ ಹೇಳಿದ್ದರು. ಸುಪ್ರೀಂಕೋರ್ಟ್ ಕೂಡ ಆಗ ಸಿಬಿಐಯನ್ನು ‘ಪಂಜರದ ಗಿಳಿ’ ಎಂದು ಕರೆದಿತ್ತು’ ಎಂದು ತಿರುಗೇಟು ನೀಡಿದರು.
ಆಪ್-ಕಾಂಗ್ರೆಸ್ ಹೊಂದಾಣಿಕೆ:
‘ಆಪ್ ಸರ್ಕಾರ ಮದ್ಯ ಹಗರಣ ನಡೆಸುತ್ತದೆ. ಆಪ್ ಭ್ರಷ್ಟಾಚಾರ ಎಸಗುತ್ತದೆ. ಮಕ್ಕಳ ಶಾಲಾ ಕೊಠಡಿಗಳನ್ನು ನಿರ್ಮಿಸುವುದರಲ್ಲೂ ಆಪ್ ಹಗರಣ ಮಾಡುತ್ತದೆ. ನೀರಿನಲ್ಲೂ ಆಪ್ ಭ್ರಷ್ಟಾಚಾರ ಎಸಗುತ್ತದೆ. ಕಾಂಗ್ರೆಸ್ ಪಕ್ಷ ಆಪ್ ವಿರುದ್ಧ ಆರೋಪ ಮಾಡುತ್ತದೆ. ಆದರೆ ಆಪ್ ವಿರುದ್ಧ ನಾವು ಕ್ರಮ ಕೈಗೊಂಡಾಗ ಕಾಂಗ್ರೆಸ್ ಪಕ್ಷ ಮೋದಿಯನ್ನು ದೂಷಿಸುತ್ತದೆ’ ಎಂದು ಪ್ರಧಾನಿ ವಾಗ್ದಾಳಿ ನಡೆಸಿದರು.