ಸಾರಾಂಶ
ಮುಜಫ್ಫರ್‌ಪುರ: ಪ್ರವಾಹ ಪೀಡಿತ ಪ್ರದೇಶಗಳ ಜನರಿಗೆ ಪರಿಹಾರ ಸಾಮಗ್ರಿ ವಿತರಣೆಗೆ ಬಂದಿದ್ದ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಸ್ವತಃ ಪ್ರವಾಹದ ನೀರಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ಬುಧವಾರ ಬಿಹಾರದಲ್ಲಿ ನಡೆದಿದೆ.
ಸಂತ್ರಸ್ತರಿಗೆ ಹೆಲಿಕಾಪ್ಟರ್ ಮೂಲಕ ಪರಿಹಾರ ಸಾಮಾಗ್ರಿಗಳನ್ನು ವಿತರಿಸಿ, ದರ್ಭಾಂಗ್‌ನಿಂದ ಬರುತ್ತಿದ್ದ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಔರೈ ಪ್ರದೇಶದ ಪ್ರವಾಹದ ನೀರಿನಲ್ಲಿ ಲ್ಯಾಂಡ್ ಆಗಿದೆ. ಕಾಪ್ಟರ್‌ನಲ್ಲಿ ವಾಯುಪಡೆಯ ನಾಲ್ವರು ಸಿಬ್ಬಂದಿಗಳಿದ್ದು, ಅವರೆಲ್ಲರೂ ಸುರಕ್ಷಿತವಾಗಿದ್ದಾರೆ.
‘ಮೇಡ್ ಇನ್ ಇಂಡಿಯಾ’ ಲೇಬಲ್ ತಯಾರಿಗೆ ಸರ್ಕಾರ ಚಿಂತನೆ
ನವದೆಹಲಿ: ಭಾರತವನ್ನು ಜಾಗತಿಕ ಮಟ್ಟದಲ್ಲಿ ಬ್ರ್ಯಾಂಡ್ ಆಗಿ ಉತ್ತೇಜಿಸುವ ಸಲುವಾಗಿ ‘ಮೇಡ್ ಇನ್ ಇಂಡಿಯಾ’ ಲೇಬಲ್ ತಯಾರಿಸಲು ಸರ್ಕಾರ ಚರ್ಚೆ ನಡೆಸುತ್ತಿದೆ. ಮೇಡ್ ಇನ್ ಜಪಾನ್, ಮೇಡ್ ಇನ್ ಸ್ವಿಜರ್ಲೆಂಡ್ ಲೇಬಲ್‌ಗಳಂತೆ ಭಾರತಕ್ಕೂ ವಿಶೇಷ ಗುರುತು ಮತ್ತು ಗುಣಮಟ್ಟವವನ್ನು ಸೃಷ್ಟಿಸುವುದು ಇದರ ಗುರಿಯಾಗಿದೆ. ‘ಸ್ವಿಜರ್ಲೆಂಡ್ ಎಂದಾಕ್ಷಣ ವಾಚ್, ಚಾಕಲೇಟ್, ಬ್ಯಾಂಕ್ ವ್ಯವಸ್ಥೆ ನೆನಪಾಗುವಂತೆ, ಭಾರತದಲ್ಲಿ ನಿರ್ದಿಷ್ಟ ಕ್ಷೇತ್ರಕ್ಕೆ ಸಂಬಂಧಿಸಿದ ಯೋಜನೆ ರೂಪಿಸಬೇಕೇ ಅಥವಾ ಎಲ್ಲಾ ಕ್ಷೇತ್ರಗಳನ್ನೂ ಒಳಗೊಂಡ ಯೋಜನೆ ರೂಪಿಸಬೇಕೇ ಎಂಬುದನ್ನು ಉನ್ನತ ಮಟ್ಟದ ಸಮಿತಿ ಪರಿಶೀಲಿಸುತ್ತಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜಾಗತಿಕ ಮಟ್ಟದಲ್ಲಿ ಭಾರತೀಯ ಉತ್ಪನ್ನಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಇಂಡಿಯಾ ಬ್ರಾಂಡ್ ಇಕ್ವಿಟಿ ಫೌಂಡೇಶನ್ ಸ್ಥಾಪಿಸಲಾಗಿದೆ.