ಸಾರಾಂಶ
ನವದೆಹಲಿ : ‘ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಮತ್ತು ಜೂಜಾಟದ ಕಂಪನಿಗಳು ಅಕ್ರಮ ಹಣ ವರ್ಗಾವಣೆ ಮತ್ತು ಭಯೋತ್ಪಾದಕರಿಗೆ ಹಣಕಾಸು ಒದಗಿಸುವ ವಾಹಿನಿಯಂತೆ ಕೆಲಸ ಮಾಡುತ್ತವೆ. ಹೀಗಾಗಿ ಇವುಗಳ ನಿಯಂತ್ರಣಕ್ಕೆ ಇನಷ್ಟು ಬಿಗಿ ಕ್ರಮ ಅಗತ್ಯ’ ಎಂದು ಕೇಂದ್ರೀಯ ವಿವಿ ಆದ ‘ರಾಷ್ಟ್ರೀಯ ರಕ್ಷಣಾ ವಿವಿ’ಯ ವರದಿಯೊಂದು ಹೇಳಿದೆ.
ಕೇಂದ್ರ ಸರ್ಕಾರವು 2021ರಲ್ಲೇ, ‘ಮಾನ್ಯತೆ ಪಡೆದ ಆನ್‌ಲೈನ್ ಗೇಮಿಂಗ್’ ಹಾಗೂ ‘ಅಕ್ರಮ ಬೆಟ್ಟಿಂಗ್/ಜೂಜಿನ’ ವ್ಯತ್ಯಾಸ ಗುರುತಿಸುವಂಥ ಕಾನೂನು ಜಾರಿಗೆ ತಂದಿದೆ. ಆದರೆ ಪ್ರಸ್ತುತ ಕಾನೂನು ಮತ್ತು ನಿಯಂತ್ರಕ ಚೌಕಟ್ಟುಗಳು ಕಾನೂನುಬದ್ಧ ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ಸಮರ್ಪಕವಾಗಿ ಪ್ರತ್ಯೇಕಿಸುವುದಿಲ್ಲ. ಹೀಗಾಗಿಯೇ ಅಕ್ರಮ ಬೆಟ್ಟಿಂಗ್ ಸುಗಮವಾಗಿ ನಡೆಯುತ್ತದೆ.
ಆದ್ದರಿಂದ ಕಾನೂನುಬದ್ಧವಾಗಿ ಕೆಲಸ ಮಾಡುವ ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಗುರುತಿಸಲು ನೋಂದಣಿ ಪದ್ಧತಿ ಜಾರಿಗೊಳಿಸಬೇಕು ಎಂದು ಗುಜರಾತ್‌ನ ಲವಾಡಾದಲ್ಲಿರುವ ವಿವಿ ಸರ್ಕಾರಕ್ಕೆ ಸಲಹೆ ನೀಡಿದೆ.‘ಅಕ್ರಮ ಆನ್‌ಲೈನ್ ಜೂಜು ಮತ್ತು ಬೆಟ್ಟಿಂಗ್ ಆ್ಯಪ್‌ಗಳು ಭಾರತೀಯ ಡಿಜಿಟಲ್ ನಾಗರಿಕರನ್ನು ಸೈಬರ್ ಸೆಕ್ಯುರಿಟಿ ದಾಳಿಗಳು ಮತ್ತು ಅಸುರಕ್ಷಿತ ಆನ್‌ಲೈನ್ ಪರಿಸರಗಳಂತಹ ಹಲವಾರು ಭದ್ರತಾ ಅಪಾಯಗಳಿಗೆ ಒಡ್ಡುತ್ತವೆ. ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಮತ್ತು ಜೂಜಿನ ವೆಬ್‌ಸೈಟ್‌ಗಳು ಮನಿ ಲಾಂಡರಿಂಗ್ ಮತ್ತು ಭಯೋತ್ಪಾದಕರಿಗೆ ಹಣಕಾಸು ಒದಗಿಸುವ ಚಾನೆಲ್‌ಗಳಾಗಿ ಕಾರ್ಯನಿರ್ವಹಿಸುತ್ತಿವೆ. ಅವು ಭಾರತದ ರಾಷ್ಟ್ರೀಯ ಭದ್ರತೆಗೆ ಬೆದರಿಕೆಯಾಗಿವೆ’ ಎಂದು ವರದಿ ಕಳವಳ ವ್ಯಕ್ತಪಡಿಸಿದೆ.
ಈ ವರದಿಯು ಭಾರತದಲ್ಲಿನ ಅಕ್ರಮ ಬೆಟ್ಟಿಂಗ್ ಪೇಟೆಯ ಅಂಕಿ ಅಂಶ ನೀಡಿಲ್ಲ. ಆದರೆ 2017ರಲ್ಲಿ ಪ್ರಕಟವಾದ ಖಾಸಗಿ ವರದಿಯೊಂದು, ಭಾರತದ ಬೆಟ್ಟಿಂಗ್ ಪೇಟೆ ವರ್ಷಕ್ಕೆ ಸುಮಾರು 10 ಲಕ್ಷ ಕೋಟಿ ರು.ನಷ್ಟು ವಹಿವಾಟು ನಡೆಸುತ್ತದೆ ಎಂದಿತ್ತು.