ಭಾರತದ ಆರ್ಥಿಕತೆ ಏರಿಕೆ,ಚೀನಾದ್ದು ಇಳಿಕೆ: ಐಎಂಎಫ್‌

| Published : Oct 11 2023, 12:45 AM IST

ಭಾರತದ ಆರ್ಥಿಕತೆ ಏರಿಕೆ,ಚೀನಾದ್ದು ಇಳಿಕೆ: ಐಎಂಎಫ್‌
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದಲ್ಲಿ ಆರ್ಥಿಕ ಚಟುವಟಿಕೆಗಳು ಗರಿಗೆದರಿದ್ದು, 2023-2024ರಲ್ಲಿ ಈ ಹಿಂದೆ ಅಂದಾಜಿಸಿದ್ದಕ್ಕಿಂತ ಹೆಚ್ಚಿನ ಆರ್ಥಿಕ ಪ್ರಗತಿಯನ್ನು ಭಾರತ ಸಾಧಿಸಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ವಿಶ್ವಾಸ ವ್ಯಕ್ತಪಡಿಸಿದೆ. ಆದರೆ ಇದೇ ವೇಳೆ ಚೀನಾದ ಜಿಡಿಪಿ ದರ ಈ ಹಿಂದೆ ಅಂದಾಜಿಸಿದ್ದಕ್ಕಿಂತ ಕುಸಿಯುವ ಸಾಧ್ಯತೆ ಇದೆ ಎಂದು ಅದು ಹೇಳಿದೆ.
ನವದೆಹಲಿ: ಭಾರತದಲ್ಲಿ ಆರ್ಥಿಕ ಚಟುವಟಿಕೆಗಳು ಗರಿಗೆದರಿದ್ದು, 2023-2024ರಲ್ಲಿ ಈ ಹಿಂದೆ ಅಂದಾಜಿಸಿದ್ದಕ್ಕಿಂತ ಹೆಚ್ಚಿನ ಆರ್ಥಿಕ ಪ್ರಗತಿಯನ್ನು ಭಾರತ ಸಾಧಿಸಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ವಿಶ್ವಾಸ ವ್ಯಕ್ತಪಡಿಸಿದೆ. ಆದರೆ ಇದೇ ವೇಳೆ ಚೀನಾದ ಜಿಡಿಪಿ ದರ ಈ ಹಿಂದೆ ಅಂದಾಜಿಸಿದ್ದಕ್ಕಿಂತ ಕುಸಿಯುವ ಸಾಧ್ಯತೆ ಇದೆ ಎಂದು ಅದು ಹೇಳಿದೆ. ಭಾರತ ಶೇ.6.1ರ ಬದಲು ಶೇ.6.3ರಷ್ಟು ಆರ್ಥಿಕ ಪ್ರಗತಿ ಕಾಣಲಿದ್ದರೆ, ಚೀನಾ ಪ್ರಗತಿ ದರ ಶೇ.5.2ರಿಂದ ಶೇ.5ಕ್ಕೆ ಇಳಿಯಲಿದೆ ಎಂದು ಐಎಂಎಫ್‌ ತಿಳಿಸಿದೆ. ಭಾರತದ ಜಿಡಿಪಿ ಏರಿಕೆ: ಐಎಂಎಫ್‌ ಮಂಗಳವಾರ ಬಿಡುಗಡೆ ಮಾಡಿರುವ ವಿಶ್ವ ಆರ್ಥಿಕ ಮುನ್ನೋಟ ವರದಿಯಲ್ಲಿ, 2023-24ರಲ್ಲಿ ಭಾರತ ಶೇ.6.3ರಷ್ಟು ಜಿಡಿಪಿ ಪ್ರಗತಿ ಸಾಧಿಸಲಿದೆ. ಇದು ಈ ಹಿಂದೆ ಅಂದಾಜಿಸಿದ್ದ ಪ್ರಮಾಣಕ್ಕಿಂತ ಶೇ.0.2ರಷ್ಟು ಅಧಿಕ ಎಂದು ಹೇಳಿದೆ. ಈ ಹಿಂದೆ ಜುಲೈನಲ್ಲಿ ಬಿಡುಗಡೆ ಮಾಡಿದ್ದ ವರದಿಯಲ್ಲಿ 2023ನೇ ಸಾಲಿನಲ್ಲಿ ಭಾರತ ಶೇ.6.1ರಷ್ಟು ಜಿಡಿಪಿ ಪ್ರಗತಿ ಸಾಧಿಸಲಿದೆ ಎಂದು ಹೇಳಲಾಗಿತ್ತು. ಆದರೆ ಬಳಕೆ ಬೇಡಿಕೆಯಲ್ಲಿ ಗಮನಾರ್ಹ ಏರಿಕೆ ದಾಖಲಾಗಿರುವುದು ಆರ್ಥಿಕ ಪ್ರಗತಿಯಲ್ಲಿ ಮತ್ತಷ್ಟು ಸುಧಾರಣೆಯ ಸುಳಿವು ನೀಡಿದೆ ಎಂದು ವರದಿ ಹೇಳಿದೆ. ಕೆಲ ದಿನಗಳ ಹಿಂದೆ ವಿಶ್ವಬ್ಯಾಂಕ್‌ ಬಿಡುಗಡೆ ಮಾಡಿದ್ದ ವರದಿಯಲ್ಲೂ ಭಾರತ ಪ್ರಸಕ್ತ ಸಾಲಿನಲ್ಲಿ ಶೇ.6.3ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ಹೇಳಲಾಗಿತ್ತು. ಮತ್ತೊಂದೆಡೆ ದೇಶದ ಜಿಡಿಪಿ ಬೆಳವಣಿಗೆ ದರ ಶೇ.6.5ರಷ್ಟಿರಲಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಈಗಾಗಲೇ ಅಂದಾಜಿಸಿದೆ. ಚೀನಾ ಇಳಿಕೆ: ಈ ನಡುವೆ 2023ರಲ್ಲಿ ಚೀನಾದ ಜಿಡಿಪಿ ದರ ಶೇ.5ಕ್ಕೆ ಕುಸಿಯಲಿದೆ ಎಂದು ವರದಿ ಹೇಳಿದೆ. ಈ ಹಿಂದಿನ ವರದಿಯಲ್ಲಿ ಐಎಂಎಫ್‌, ಚೀನಾ ಶೇ.5.2ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದಿತ್ತು. ಜೊತೆಗೆ 2024ರಲ್ಲಿ ಜಿಡಿಪಿ ದರ ಶೇ.4.2ಕ್ಕೆ ಇಳಿಯಲಿದೆ ಎಂದು ಹೇಳಿದೆ. ಈ ಹಿಂದಿನ ವರದಿಯಲ್ಲಿ ಚೀನಾ 2024ರಲ್ಲಿ ಶೇ.4.7ರಷ್ಟು ಬೆಳವಣಿಗೆ ಹೊಂದಲಿದೆ ಎನ್ನಲಾಗಿತ್ತು.