ಸಾರಾಂಶ
‘1937ರಲ್ಲಿ ನಮ್ಮ ರಾಷ್ಟ್ರೀಯ ಗೀತೆ ವಂದೇ ಮಾತರಂನ ಬಹುಮುಖ್ಯ ಚರಣಗಳಿಗೆ ಕತ್ತರಿ ಹಾಕಲಾಯಿತು. ಅದೇ ಮುಂದೆ ದೇಶವಿಭಜನೆಗೆ ನಾಂದಿ ಹಾಡಿತು. ಅಂಥ ವಿಭಜಕ ಮನಃಸ್ಥಿತಿ ಇಂದಿಗೂ ದೇಶಕ್ಕೆ ಸವಾಲಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೆಸರೆತ್ತದೇ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ನವದೆಹಲಿ : ‘1937ರಲ್ಲಿ ನಮ್ಮ ರಾಷ್ಟ್ರೀಯ ಗೀತೆ ವಂದೇ ಮಾತರಂನ ಬಹುಮುಖ್ಯ ಚರಣಗಳಿಗೆ ಕತ್ತರಿ ಹಾಕಲಾಯಿತು. ಅದೇ ಮುಂದೆ ದೇಶವಿಭಜನೆಗೆ ನಾಂದಿ ಹಾಡಿತು. ಅಂಥ ವಿಭಜಕ ಮನಃಸ್ಥಿತಿ ಇಂದಿಗೂ ದೇಶಕ್ಕೆ ಸವಾಲಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೆಸರೆತ್ತದೇ ಕಾಂಗ್ರೆಸ್ ಪಕ್ಷದ ವಿರುದ್ಧ ಶುಕ್ರವಾರ ಆಕ್ರೋಶ ಹೊರಹಾಕಿದ್ದಾರೆ.
ಇದಕ್ಕೆ ಪೂರಕವೆಂಬಂತೆ, ‘ಮಾಜಿ ಪ್ರಧಾನಿ ನೆಹರು ಮತ್ತು ಕಾಂಗ್ರೆಸ್, 1937ರಲ್ಲಿ ವಂದೇ ಮಾತರಂನ ಸಾಹಿತ್ಯವನ್ನು ಬದಲಿಸುವ ಮೂಲಕ, ವಿಶೇಷವಾಗಿ ದುರ್ಗಾದೇವಿಯ ಉಲ್ಲೇಖಗಳನ್ನು ತೆಗೆದುಹಾಕಿಸಿದರು. ಈ ಮೂಲಕ ಕೋಮುವಾದಕ್ಕೆ ಸಹಕಾರವಿತ್ತರು’ ಎಂದು ಬಿಜೆಪಿ ವಕ್ತಾರ ಸಿ.ಆರ್. ಕೇಶವನ್ ಆರೋಪಿಸಿದ್ದಾರೆ.
ಬಂಕಿಮಚಂದ್ರ ಚಟರ್ಜಿ ವಿರಚಿತ ವಂದೇ ಮಾತರಂ ಗೀತೆ ರಚನೆಯಾಗಿ ಶುಕ್ರವಾರ 150 ವರ್ಷಗಳು ಪೂರ್ಣವಾದ ಕಾರಣ ವರ್ಷಪೂರ್ತಿ ನಡೆಯಲಿರುವ ಕಾರ್ಯಕ್ರಮಗಳಿಗೆ ದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರಧಾನಿ ಮೋದಿ ಚಾಲನೆ ನೀಡಿದರು. ಇದೇ ವೇಳೆ ಗೀತೆಯ ಸ್ಮರಣಾರ್ಥ ಅಂಚೆ ಚೀಟಿ ಮತ್ತು ನಾಣ್ಯವನ್ನು ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಅವರು, ‘ವಂದೇ ಮಾತರಂ ಗೀತೆ ಪ್ರತಿ ಭಾರತೀಯನ ಭಾವನೆಗಳನ್ನು ವ್ಯಕ್ತಪಡಿಸಿ, ಭಾರತದ ಸ್ವಾತಂತ್ರ್ಯ ಹೋರಾಟದ ಧ್ವನಿಯಾಗಿ ಪರಿಣಮಿಸಿತು. ದುರದೃಷ್ಟವಶಾತ್, 1937ರಲ್ಲಿ ಅದರ ಆತ್ಮವಾಗಿದ್ದ ಕೆಲವು ಮುಖ್ಯ ಚರಣಗಳಿಗೆ ಕತ್ತರಿ ಹಾಕಲಾಯಿತು. ವಂದೇ ಮಾತರಂನ ವಿಭಜನೆ ಮುಂದೆ ದೇಶವಿಭಜನೆಗೆ ಬೀಜ ಬಿತ್ತಿತು. ರಾಷ್ಟ್ರನಿರ್ಮಾಣದ ಈ ಮಹಾಮಂತ್ರಕ್ಕೆ ಈ ಅನ್ಯಾಯ ಏಕೆ ನಡೆಯಿತು ಎಂಬುದನ್ನು ಇಂದಿನ ಪೀಳಿಗೆ ತಿಳಿದುಕೊಳ್ಳಬೇಕು. ಈ ವಿಭಜಕ ಮನಃಸ್ಥಿತಿ ಇನ್ನೂ ದೇಶಕ್ಕೆ ಸವಾಲಾಗಿದೆ’ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ನೆಹರು ಪ್ರಮಾದ-ಬಿಜೆಪಿ:
ಇದೇ ವೇಳೆ ವಂದೇ ಮಾತರಂ ಕತ್ತರಿಸಿದ್ದು ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಪ್ರಮಾದ ಎಂದು ಬಿಜೆಪಿ ವಕ್ತಾರ ಸಿ.ಆರ್. ಕೇಶವನ್ ಆರೋಪಿಸಿದ್ದಾರೆ.
ನೆಹರು ಅವರು ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರಿಗೆ ಬರೆದ ಪತ್ರವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಅವರು, ‘ವಂದೇ ಮಾತರಂನಲ್ಲಿ ದುರ್ಗಾದೇವಿಯ ಬಗ್ಗೆ ಉಲ್ಲೇಖವಿದೆ. ಅದು ಮುಸ್ಲಿಮರಿಗೆ ನೋವುಂಟು ಮಾಡುತ್ತದೆ. ಇದು ರಾಷ್ಟ್ರಗೀತೆಯಾಗಲು ಅರ್ಹವಲ್ಲ ಎಂದು ನೆಹರು 1937ರಲ್ಲಿ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದರು. ದುರ್ಗೆಗೆ ಸಂಬಂಧಿಸಿದ ಚರಣಗಳನ್ನು ಕತ್ತರಿಸುವ ಮೂಲಕ ನೆಹರು ಮತ್ತು ಕಾಂಗ್ರೆಸ್ ಕೋಮುವಾದಿ ಕಾರ್ಯಸೂಚಿಗೆ ಲಜ್ಜೆಗೆಟ್ಟಂತೆ ಸಹಕಾರವಿತ್ತರು’ ಎಂದು ಟೀಕಿಸಿದ್ದಾರೆ.
ವಂದೇಗೆ ಬಿಜೆಪಿ ಅವಮಾನ
ಇಂದು ರಾಷ್ಟ್ರೀಯತೆಯ ಸ್ವಯಂಘೋಷಿತ ರಕ್ಷಕರೆಂದು ಹೇಳಿಕೊಳ್ಳುವ ಆರ್‌ಎಸ್‌ಎಸ್ ಮತ್ತು ಬಿಜೆಪಿ ತಮ್ಮ ಶಾಖೆಗಳಲ್ಲಿ ಅಥವಾ ಕಚೇರಿಗಳಲ್ಲಿ ವಂದೇ ಮಾತರಂ ಅಥವಾ ನಮ್ಮ ರಾಷ್ಟ್ರಗೀತೆ ಜನ ಗಣ ಮನ ಹಾಡಿಲ್ಲ. ಬದಲಾಗಿ, ‘ನಮಸ್ತೆ ಸದಾ ವತ್ಸಲೇ’ ಹಾಡುತ್ತಾರೆ. ವಂದೇ ಮಾತರಂನ ಮೊದಲ 2 ಚರಣ ಮಾತ್ರ ಅಂಗೀಕರಿಸಿ ಎಂದು 1937ರಲ್ಲಿ ಹೇಳಿದ್ದು ಟ್ಯಾಗೋರರು. ಅವರ ಸೂಚನೆ ಮೇರೆಗೆ ಅವನ್ನು ಉಳಿದ ಚರಣ ಕೈಬಿಡಲಾಗಿತ್ತು.
- ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಧ್ಯಕ್ಷ
