ಸಾರಾಂಶ
ಶ್ರೀನಗರ: ಪಹಲ್ಗಾಮ್ ಉಗ್ರ ದಾಳಿ ಹಿಂದಿನ ಉದ್ದೇಶ ಭಾರತೀಯರನ್ನು ಧರ್ಮದ ಆಧಾರದ ಮೇಲೆ ವಿಭಜಿಸುವುದೇ ಆಗಿದೆ. ಹೀಗಾಗಿ ಭಯೋತ್ಪಾದನೆಯನ್ನು ಮಣಿಸಬೇಕಿದ್ದರೆ ಭಾರತ ಒಗ್ಗಟ್ಟಾಗಬೇಕಿದೆ ಎಂದು ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಇದೊಂದು ಘೋರ ದುರಂತ, ನಾನು ಇಲ್ಲಿ ಏನಾಗುತ್ತಿದೆ, ಯಾವ ರೀತಿಯಲ್ಲಿ ನೆರವು ನೀಡಬಹುದು ಎಂದು ಗಮನಿಸಲು ಕಾಶ್ಮೀರಕ್ಕೆ ಬಂದಿದ್ದೇನೆ. ಜಮ್ಮು ಮತ್ತು ಕಾಶ್ಮೀರಿಗರು ಈ ಕೃತ್ಯವನ್ನು ಖಂಡಿಸಿದ್ದಾರೆ. ಅವರೆಲ್ಲ ದೇಶಕ್ಕೆ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ ಎಂದು ರಾಹುಲ್ ಗಾಂಧಿ ಸುದ್ದಿಗಾರರಿಗೆ ತಿಳಿಸಿದರು.
ಪಹಲ್ಗಾಮ್ ದಾಳಿ ಘಟನೆ ಹಿನ್ನೆಲೆಯಲ್ಲಿ ಶುಕ್ರವಾರ ಶ್ರೀನಗರದ ಬದಾಮಿಬಾಗ್ ಕಂಟೋನ್ಮೆಂಟ್‌ನಲ್ಲಿರುವ ಸೇನೆಯ 92ನೇ ಬೇಸ್ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ ವಿಚಾರಿಸಿದರು.
ನಾನು ಒಬ್ಬ ಗಾಯಾಳುವನ್ನು ಭೇಟಿಯಾದೆ, ಉಳಿದವರು ವಾಪಸಾಗಿರುವ ಹಿನ್ನೆಲೆಯಲ್ಲಿ ಅವರ ಜತೆ ಮಾತುಕತೆ ಸಾಧ್ಯವಾಗಲಿಲ್ಲ. ಘಟನೆಯಲ್ಲಿ ತಮ್ಮವರನ್ನು ಕಳೆದುಕೊಂಡವರ ಜತೆಗೆ ನನ್ನ ಅಭಿಮಾನ ಮತ್ತು ಪ್ರೀತಿ ಸದಾ ಇರಲಿದೆ. ಇಂದು ಇಡೀ ದೇಶ ಒಂದಾಗಿ ನಿಂತಿದೆ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು.
ಇದೇ ವೇಳೆ ಗುರುವಾರ ನಡೆದ ಸರ್ವಪಕ್ಷ ಸಭೆಯಲ್ಲಿ ಪ್ರತಿಪಕ್ಷಗಳು ಒಂದಾಗಿ ಪಹಲ್ಗಾಮ್ ಘಟನೆಯನ್ನು ಖಂಡಿಸಿವೆ. ಜತೆಗೆ ಸರ್ಕಾರದ ಬೆನ್ನಿಗೆ ನಿಲ್ಲುವುದಾಗಿ ಭರವಸೆ ನೀಡಿದೆ ಎಂದು ರಾಹುಲ್ ಗಾಂಧಿ ತಿಳಿಸಿದರು.
ಈ ನಡುವೆ, ಜಮ್ಮು ಮತ್ತು ಕಾಶ್ಮೀರದ ಲೆಪ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ, ಘಟನೆಯ ಕುರಿತು ವಿವರಣೆ ನೀಡಿದರು. ಈ ವೇಳೆ ನಾನು ಮತ್ತು ನಮ್ಮ ಪಕ್ಷ ನಿಮ್ಮ ಜತೆಗಿರಲಿದೆ ಎಂಬ ಭರವಸೆಯನ್ನು ಅವರಿಗೆ ನೀಡಿದ್ದಾಗಿ ರಾಹುಲ್ ತಿಳಿಸಿದರು.
ಘಟನೆ ಬಳಿಕ ದೇಶದ ಕೆಲವೆಡೆ ಕಾಶ್ಮೀರಿಗರಿಗೆ ಕಿರುಕುಳ ಆಗುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ನಾವೆಲ್ಲರೂ ಒಂದಾಗಿ ನಿಂತು ಇಂಥ ಕೃತ್ಯದ ವಿರುದ್ಧ ಹೋರಾಡಬೇಕಿದೆ ಮತ್ತು ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಾಶ ಮಾಡಬೇಕಿದೆ ಎಂದು ಹೇಳಿದರು.
ಇದಕ್ಕೂ ಮೊದಲು ರಾಹುಲ್ ಗಾಂಧಿ ಅವರು ವ್ಯಾಪಾರಿಗಳು, ವಿದ್ಯಾರ್ಥಿ ನಾಯಕರು ಮತ್ತು ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಪ್ರತಿನಿಧಿಗಳನ್ನು ಭೇಟಿಯಾಗಿ ಸಮಸ್ಯೆ ಆಲಿಸಿದರು.