ಸಾರಾಂಶ
: ಅಕ್ಷರಗಳೆಲ್ಲ ಕೀಲಿಮಣೆಯಲ್ಲೇ ಕಳೆದುಹೋಗುತ್ತಿರುವ ಇಂದಿನ ಡಿಜಿಟಲ್ ಯುಗದಲ್ಲೂ ಕೈಬರಹಗಳೇ ಬೆಸ್ಟ್. ಇದು ಸೃಜನಾತ್ಮಕತೆ ಉತ್ತೇಜಿಸಿ, ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ ಎಂದು ಹಲವು ಸಂಶೋಧನೆಗಳೇ ಹೇಳಿವೆ.
ರಾಯ್‌ಪುರ: ಅಕ್ಷರಗಳೆಲ್ಲ ಕೀಲಿಮಣೆಯಲ್ಲೇ ಕಳೆದುಹೋಗುತ್ತಿರುವ ಇಂದಿನ ಡಿಜಿಟಲ್ ಯುಗದಲ್ಲೂ ಕೈಬರಹಗಳೇ ಬೆಸ್ಟ್. ಇದು ಸೃಜನಾತ್ಮಕತೆ ಉತ್ತೇಜಿಸಿ, ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ ಎಂದು ಹಲವು ಸಂಶೋಧನೆಗಳೇ ಹೇಳಿವೆ. ಇದಕ್ಕೆ ಪೂರಕ ಎಂಬಂತೆ ಛತ್ತೀಸ್‌ಗಢದ ಹಣಕಾಸು ಸಚಿವ ಒ.ಪಿ.ಚೌಧರಿ ಅವರು ಕೈಬರಹದಲ್ಲೇ ಸಿದ್ಧಪಡಿಸಿದ ಬಜೆಟ್ ಪ್ರತಿ ಮಂಡಿಸುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. ಹೊಸ ಸಂಪ್ರದಾಯವೊಂದಕ್ಕೆ ನಾಂದಿ ಹಾಡಿದ್ದಾರೆ.
ಕಂಪ್ಯೂಟರ್ ಮುದ್ರಿತ ಬಜೆಟ್ ಪ್ರತಿ ಮಂಡಿಸುವ ಪರಿಪಾಠ ಸಾಮಾನ್ಯವಾಗಿರುವಾಗ ಸ್ವತಃ ಹಣಕಾಸು ಸಚಿವರೇ ಕೈಬರಹದಲ್ಲಿ ಸಿದ್ಧಪಡಿಸಿದ 100 ಪುಟಗಳ ಬಜೆಟ್ ಪ್ರತಿ ಮಂಡಿಸಿದ್ದು ಛತ್ತೀಸ್‌ಗಡದ ಇತಿಹಾಸದಲ್ಲಿ ಇದೇ ಮೊದಲು.ಬರವಣಿಗೆಯ ಮೂಲ ಸಂಪ್ರದಾಯವನ್ನು ಪಾಲಿಸಿ ಈ ಬಾರಿಯ ಬಜೆಟ್ ಮಂಡಿಸಲಾಗಿದೆ. ಈ ಮೂಲಕ ಸ್ವಂತಿಕೆಗೆ ಉತ್ತೇಜನ ನೀಡಲಾಗಿದೆ. ಈಗಿನ ಡಿಜಿಟಲ್ ಯುಗದಲ್ಲಿ ಕೈಬರಹದ ಬಜೆಟ್ ಪ್ರತಿ ಮಂಡಿಸುವುದು ಮಹತ್ವ ಪಡೆದಿದೆ. ಇದು ವಿಶ್ವಾರ್ಹತೆ ಮತ್ತು ಪಾರದರ್ಶಕತೆಯನ್ನು ಉತ್ತೇಜಿಸುತ್ತದೆ ಎಂದು ಮಾಜಿ ಐಎಎಸ್ ಅಧಿಕಾರಿಯೂ ಆಗಿರುವ ಚೌಧರಿ ಅಭಿಪ್ರಾಯಪಟ್ಟಿದ್ದಾರೆ.
ಕೈಬರಹದಲ್ಲೇ ಬಜೆಟ್ ಪ್ರತಿ ಸಿದ್ಧಪಡಿಸುವುದು ಸುಲಭದ ಕೆಲಸವೇನಲ್ಲ. ಯಾಕೆಂದರೆ ಬಜೆಟ್ ಪ್ರತಿ ಸರ್ಕಾರದ ಅಧಿಕೃತ ದಾಖಲೆ. ಹೀಗಾಗಿ ಯಾವುದಾದರೂ ಒಂದು ಪದ ಅಥವಾ ಸಾಲು ತಪ್ಪಾಗಿದ್ದರೂ ಸ್ಪಷ್ಟತೆಗಾಗಿ ಚೌಧರಿ ಅವರು ಅದನ್ನು ಸಂಪೂರ್ಣವಾಗಿ ಹೊಸದಾಗಿ ಬರೆಯುತ್ತಿದ್ದರು. ಬಜೆಟ್ ಪ್ರತಿ ಪೂರ್ಣಗೊಳಿಸಲು ಮೂರು ರಾತ್ರಿ ಬಿಡುವಿಲ್ಲದೆ ಕೆಲಸ ಮಾಡಿದ್ದಾರೆ ಎನ್ನುತ್ತಾರೆ ಆಪ್ತರು.