ಮೋದಿಯವರನ್ನು ಮಾನಸಿಕವಾಗಿ ಸೋಲಿಸಿದ್ದು ವಿಶ್ವಾಸ ಕಳೆದುಕೊಂಡಿದ್ದಾರೆ : ರಾಹುಲ್‌ ವಾಗ್ದಾಳಿ

| Published : Sep 05 2024, 12:38 AM IST / Updated: Sep 05 2024, 04:30 AM IST

'Modi ko Psychologically Uda Diya Hai': Rahul Gandhi in Ramban | Watch

ಸಾರಾಂಶ

ಇಂಡಿಯಾ ಕೂಟವು ಪ್ರಧಾನಿ ಮೋದಿಯವರನ್ನು ಮಾನಸಿಕವಾಗಿ ಸೋಲಿಸಿದ್ದು, ಅವರು ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಈ ಚುನಾವಣೆಯಲ್ಲಿ ಭಗವಂತ ಜನರ ಇಚ್ಛೆಯಂತೆ ನಡೆದುಕೊಳ್ಳುತ್ತೇನೆ ಎಂಬ ಸಂದೇಶವನ್ನು ಮೋದಿಯವರಿಗೆ ನೀಡಿದ್ದಾರೆ ಎಂದೂ ಅವರು ಹೇಳಿದ್ದಾರೆ.

ನವದೆಹಲಿ: ಇಂಡಿಯಾ ಕೂಟವು ಪ್ರಧಾನಿ ಮೋದಿಯವರನ್ನು ಮಾನಸಿಕವಾಗಿ ಸೋಲಿಸಿದ್ದು, ಅವರು ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ಜಮ್ಮು-ಕಾಶ್ಮೀರದ ರಾಮ್‌ಬನ್‌ ಜಿಲ್ಲೆಯಲ್ಲಿ ಚುನಾವಣೆಯ ಪ್ರಯುಕ್ತ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ರಾಹುಲ್‌, ‘ತಮಗೆ ಭಗವಂತನೊಂದಿಗೆ ನೇರ ಸಂಬಂಧವಿದೆ ಎಂದಿದ್ದ ಮೋದಿ ತಮ್ಮನ್ನು ತಾವು ದೈವಿಕ ಸ್ವರೂಪಿ ಎಂದು ಕರೆದುಕೊಂಡಿದ್ದರು. ಆದರೆ ಈ ಚುನಾವಣೆಯಲ್ಲಿ ಭಗವಂತ ಜನರ ಇಚ್ಛೆಯಂತೆ ನಡೆದುಕೊಳ್ಳುತ್ತೇನೆ ಎಂಬ ಸಂದೇಶವನ್ನು ಅವರಿಗೆ ನೀಡಿದ್ದಾರೆ’ ಎಂದು ಹೇಳಿದ್ದಾರೆ.

ಈ ವೇಳೆ ಬಿಜೆಪಿ ನಡೆಸಲು ಹಿಂಜರಿಯುತ್ತಿರುವ ಜಾತಿಗಣತಿಗೆ ಅದರ ಸೈದ್ಧಾಂತಿಕ ಸಂಸ್ಥೆಯಾದ ಆರ್‌ಎಸ್‌ಎಸ್‌ ಬೆಂಬಲ ಸೂಚಿಸಿರುವುದನ್ನೂ ಉಲ್ಲೇಖಿಸಿದ್ದಾರೆ. ಜೊತೆಗೆ ‘ಸಂಸತ್ತಿನಲ್ಲಿ ನಾನು ಮೋದಿಯವರ ಎದುರು ಕೂರುತ್ತಿದ್ದಂತೆ ಅವರ ವಿಶ್ವಾಸ ಕ್ಷೀಣಿಸುತ್ತದೆ. ದೇಶದ ಜನತೆಯಿಂದ ಅವರು ಭಯಭೀತರಾಗಿದ್ದಾರೆ. ಬಿಜೆಪಿ ಹಾಗೂ ನರೇಂದ್ರ ಮೋದಿ ಇನ್ನು ಕೆಲ ಸಮಯ ಮಾತ್ರ ಅಧಿಕಾರದಲ್ಲಿರುತ್ತಾರೆ’ ಎಂದು ವ್ಯಂಗ್ಯವಾಡಿದ್ದಾರೆ.

ಈ ವೇಳೆ ಜಮ್ಮು-ಕಾಶ್ಮೀರಕ್ಕೆ ರಾಜ್ಯದ ಸ್ಥಾನ ಮರಳಿಸಲು ಇಂಡಿಯಾ ಕೂಟ ಎಲ್ಲಾ ರೀತಿಯ ಪ್ರಯತ್ನ ಮಾಡಲಿದೆ ಎಂದು ರಾಹುಲ್‌ ಭರವಸೆ ನೀಡಿದ್ದಾರೆ.

==

ರಾಹುಲ್‌, ರಾಜೀವ್‌ಗಿಂತ ಬುದ್ಧಿವಂತ, ತಂತ್ರಗಾರ : ಸ್ಯಾಮ್‌ ಪಿತ್ರೋಡಾ ಪ್ರಶಂಸೆ

ನವದೆಹಲಿ: ರಾಜೀವ್‌ ಗಾಂಧಿಯವರಿಗೆ ಹೋಲಿಸಿದರೆ ಅವರ ಮಗ ರಾಹುಲ್‌ ಗಾಂಧಿ ಹೆಚ್ಚು ಬುದ್ಧಿವಂತ ಎಂದು ಗಾಂಧಿ ಕುಟುಂಬದೊಂದಿಗೆ ಬಹುಕಾಲದ ನಂಟು ಹೊಂದಿರುವ ಸ್ಯಾಮ್‌ ಪಿತ್ರೋಡಾ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ರಾಜೀವ್‌- ರಾಹುಲ್‌ ನಡುವಿನ ಸಾಮ್ಯತೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪಿತ್ರೋಡಾ, ‘ಅನೇಕ ಪ್ರಧಾನಿಗಳನ್ನು ಹತ್ತಿರದಿಂದ ನೋಡುವ ಅವಕಾಶ ನನಗೆ ದೊರೆತಿತ್ತು. ರಾಜೀವ್‌ಗೆ ಹೋಲಿಸಿದರೆ ರಾಹುಲ್‌ ಹೆಚ್ಚು ಬುದ್ಧಿವಂತ. ರಾಹುಲ್‌ ತಂತ್ರಗಾರಿಕೆಯಲ್ಲಿ ತಮ್ಮ ತಂದೆಗಿಂತ ಮುಂದಿದ್ದಾರೆ. ರಾಹುಲ್‌ರಲ್ಲಿ ಮುಂದಿನ ಪ್ರಧಾನಿಯಾಗುವ ಎಲ್ಲಾ ಲಕ್ಷಣಗಳೂ ಇವೆ. ಜೊತೆಗೆ ಜನರ ಪ್ರತಿ ಇಬ್ಬರಿಗೂ ಸಮನಾದ ಕಾಳಜಿಯಿದೆ’ ಎಂದು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ, ‘ಲಕ್ಷಗಟ್ಟಲೆ ಹಣ ಸುರಿದು ರಾಹುಲ್‌ರ ವ್ಯಕ್ತಿತ್ವವನ್ನು ತಿರುಚಿ ಮಾಧ್ಯಮಗಳಲ್ಲಿ ತೋರಿಸಲಾಗುತ್ತಿದೆ. ಸುಶೀಕ್ಷಿತರಾದ ಅವರು ಕಾಲೇಜಿಗೇ ಹೋಗಿಲ್ಲ ಎಂದು ಟೀಕಿಸಲಾಗುತ್ತಿದೆ. ಇವೆಲ್ಲದರ ವಿರುದ್ಧ ಗಟ್ಟಿಯಾಗಿ ನಿಂತು ಸೆಣಸಿದ್ದಕ್ಕೆ ರಾಹುಲ್‌ಗೆ ಅಭಿನಂದನೆ. ಅವರ ಜಾಗದಲ್ಲಿ ಇನ್ನೊಬ್ಬರಿದ್ದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.