10ನೇ ಬಾರಿ ಸಿಎಂ ನಿತೀಶ್‌ ಕುಮಾರ್‌ ಪ್ರಮಾಣ ವಚನ

| N/A | Published : Nov 21 2025, 01:30 AM IST

Nitish Kumar

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಸೇರಿ ಎನ್‌ಡಿಎ ಮೈತ್ರಿಕೂಟದ ಮುಖ್ಯಮಂತ್ರಿಗಳು, ಹಲವು ನಾಯಕರ ಸಮ್ಮುಖದಲ್ಲಿ ಜೆಡಿಯು ಹಿರಿಯ ಮುಖಂಡ ನಿತೀಶ್‌ ಕುಮಾರ್‌ ಅವರು 10ನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

 ಪಟ್ನಾ: ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಸೇರಿ ಎನ್‌ಡಿಎ ಮೈತ್ರಿಕೂಟದ ಮುಖ್ಯಮಂತ್ರಿಗಳು, ಹಲವು ನಾಯಕರ ಸಮ್ಮುಖದಲ್ಲಿ ಜೆಡಿಯು ಹಿರಿಯ ಮುಖಂಡ ನಿತೀಶ್‌ ಕುಮಾರ್‌ ಅವರು 10ನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮೂಲಕ ಬಿಹಾರದ ಇತಿಹಾಸದಲ್ಲಿ ಅತಿಹೆಚ್ಚು ಬಾರಿ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಕೀರ್ತಿಗೆ ನಿತೀಶ್‌ ಭಾಜನರಾಗಿದ್ದಾರೆ.

ಗಾಂಧಿ ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ಅದ್ಧೂರಿ ಸಮಾರಂಭಲ್ಲಿ ನಿತೀಶ್‌ ಪ್ರಮಾಣ ವಚನ ಸ್ವೀಕರಿಸಿದರು. ಈ ಹಿಂದಿನ ಎನ್‌ಡಿಎ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಗಳಾಗಿದ್ದ ಸಮರ್ಥ್ ಚೌಧರಿ, ವಿಜಯ್‌ ಕುಮಾರ್‌ ಸಿನ್ಹಾ ಸೇರಿ ನಿತೀಶ್‌ ಕುಮಾರ್‌ ಅವರನ್ನು ಉಪಮುಖ್ಯಮಂತ್ರಿಗಳಾಗಿ ಆಯ್ಕೆ ಮಾಡಲಾಯಿತು. ಒಟ್ಟು 26 ಸಚಿವರು ಪ್ರಮಾಣವಚನ ಸ್ವೀಕರಿಸಿದರು.

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು 243ರಲ್ಲಿ 202 ಸ್ಥಾನಗಳನ್ನು ಗಳಿಸುವ ಮೂಲಕ ಅಭೂತಪೂರ್ವ ದಾಖಲೆ ಬರೆದಿತ್ತು. 89 ಸ್ಥಾನಗಳನ್ನು ಗೆದ್ದ ಬಿಜೆಪಿ ಎನ್‌ಡಿಎ ಮೈತ್ರಿಕೂಟದಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ನಿರೀಕ್ಷೆಯಂತೆ ಮುಖ್ಯಮಂತ್ರಿ ಹುದ್ದೆಯನ್ನು ಮಿತ್ರಪಕ್ಷ ಜೆಡಿಯುನ ನಿತೀಶ್‌ ಕುಮಾರ್‌ ಅವರಿಗೆ ಬಿಟ್ಟುಕೊಟ್ಟಿತು.

ಈ ಅದ್ಧೂರಿ ಪ್ರಮಾಣ ವಚನ ಸಮಾರಂಭದಲ್ಲಿ ಎನ್‌ಡಿಎ ಮೈತ್ರಿಕೂಟದ ಮುಖ್ಯಮಂತ್ರಿಗಳಾದ ಮುಖ್ಯಮಂತ್ರಿಗಳಾದ ಚಂದ್ರಬಾಬು ನಾಯ್ಡು, ಯೋಗಿ ಆದಿತ್ಯನಾಥ್‌, ಹಿಮ್ಮಂತ್‌ ಬಿಸ್ವಾ ಶರ್ಮಾ, ದೇವೇಂದ್ರ ಫಡ್ನವೀಸ್‌, ಮೋಹನ್ ಯಾದವ್‌, ರೇಖಾ ಗುಪ್ತಾ, ಬಿಜೆಪಿ ರಾಷ್ಟ್ರಾಧ್ಯಕ್ಷ ನಡ್ಡಾ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

ಮೋದಿ ಅಭಿನಂದನೆ:

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ನಿತೀಶ್‌ ಕುಮಾರ್‌ ಅವರಿಗೆ ಬಿಹಾರಕ್ಕೆ ತೆರಳುವ ಮುನ್ನ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಶುಭಾಶಯ ತಿಳಿಸಿರುವ ಪ್ರಧಾನಿ ಮೋದಿ, ನಿತೀಶ್‌ ಕುಮಾರ್‌ ಅವರೊಬ್ಬ ಅನುಭವಿ ಆಡಳಿತಗಾರ. ಹಲವು ವರ್ಷಗಳ ಕಾಲ ಉತ್ತಮ ಆಡಳಿತ ನೀಡಿದ ಅನುಭ‍ವ ಅವರಿಗಿದೆ ಎಂದು ತಿಳಿಸಿದ್ದಾರೆ.

ಸೀಟು ಹಂಚಿಕೆಗೆ ಬಿಜೆಪಿ, ಜೆಡಿಯು ಮಧ್ಯೆ 17-15 ಸ್ಥಾನ ಫಾರ್ಮುಲಾ

89 ಸ್ಥಾನಗಳಿಕೆಯೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಯು ನಿತೀಶ್‌ ಕುಮಾರ್‌ ಸರ್ಕಾರದಲ್ಲಿ 17 ಸಚಿವ ಸ್ಥಾನ (ಸ್ಪೀಕರ್‌ ಹುದ್ದೆ ಬಿಟ್ಟು) ಪಡೆದರೆ, ಮುಖ್ಯಮಂತ್ರಿ ಸ್ಥಾನ ಸೇರಿ ಜೆಡಿಯು 15 ಸ್ಥಾನ, ಎಲ್‌ಜೆಪಿ 3, ಎಚ್‌ಎಎಂ ಮತ್ತು ರಾಷ್ಟ್ರೀಯ ಲೋಕ್ ಮೋರ್ಚಾ ಪಕ್ಷಕ್ಕೆ ತಲಾ ಒಂದು ಸ್ಥಾನ ನೀಡಲಾಗಿದೆ.

Read more Articles on