ಎಲೆಕ್ಷನ್‌ ಬಳಿಕ ಮುಸ್ಲಿಮರ ಮೇಲೆ ದಾಳಿ ಏರಿಕೆ, ಇದು ಪ್ರತೀಕಾರವೇ: ಒವೈಸಿ?

| Published : Jun 14 2024, 01:03 AM IST / Updated: Jun 14 2024, 04:45 AM IST

ಎಲೆಕ್ಷನ್‌ ಬಳಿಕ ಮುಸ್ಲಿಮರ ಮೇಲೆ ದಾಳಿ ಏರಿಕೆ, ಇದು ಪ್ರತೀಕಾರವೇ: ಒವೈಸಿ?
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭಾ ಚುನಾವಣೆ ಬಳಿಕ ದೇಶದಾದ್ಯಂತ ಮುಸ್ಲಿಮರ ಮೇಲೆ ದಾಳಿ ಏರಿಕೆಯಾಗುತ್ತಿದೆ. ಇದು ಅವರ ವಿರುದ್ಧ ಪ್ರತಿಕಾರದ ಕ್ರಮವೇ ಎಂದು ಹೈದರಾಬಾದ್‌ ಸಂಸದ ಹಾಗೂ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಪ್ರಶ್ನಿಸಿದ್ದಾರೆ.

ಹೈದರಾಬಾದ್‌: ಲೋಕಸಭಾ ಚುನಾವಣೆ ಬಳಿಕ ದೇಶದಾದ್ಯಂತ ಮುಸ್ಲಿಮರ ಮೇಲೆ ದಾಳಿ ಏರಿಕೆಯಾಗುತ್ತಿದೆ. ಇದು ಅವರ ವಿರುದ್ಧ ಪ್ರತಿಕಾರದ ಕ್ರಮವೇ ಎಂದು ಹೈದರಾಬಾದ್‌ ಸಂಸದ ಹಾಗೂ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಪ್ರಶ್ನಿಸಿದ್ದಾರೆ. 

ಈ ಕುರಿತ ಟ್ವೀಟ್‌ ಮಾಡಿರುವ ಒವೈಸಿ ‘ಲೋಕಸಭಾ ಚುನಾವಣೆ ಮುಗಿದ ಬಳಿಕ ದೇಶಾದ್ಯಂತ ಮುಸ್ಲಿಮರ ಮೇಲೆ ದಾಳಿ ಏರಿಕೆಯಾಗುತ್ತಿದೆ. ಉತ್ತರಪ್ರದೇಶದಲ್ಲಿ ಇಬ್ಬರು ಮುಸ್ಲಿಮರ ಹತ್ಯೆಯಾಗಿದೆ. ಕೆಲವೆಡೆ ಮುಸ್ಲಿಮರ ಮನೆಗಳನ್ನುದ್ವಂಸ ಮಾಡಿದ್ದಾರೆ. ಹಾಗೆಯೇ ಛತ್ತೀಸ್‌ಗಢದಲ್ಲಿ ಚಿತ್ರಹಿಂಸೆ ನೀಡುತ್ತಿದ್ದಾರೆ. ಇದು ಮುಸ್ಲಿಮರ ವಿರುದ್ಧದ ಸಂಘ ಪರಿವಾರದವರ ಪ್ರತಿಕಾರವೇ? ಎಂದು ಟ್ವೀಟ್‌ ಮಾಡಿದ್ದಾರೆ.

ಜಾರಂಗೆ ಮರಾಠ ಮೀಸಲು ಉಪವಾಸ ಹೋರಾಟ ಅಂತ್ಯ: ಸರ್ಕಾರಕ್ಕೆ ತಿಂಗಳ ಗಡುವು

ಛತ್ರಪತಿ ಸಂಭಾಜಿನಗರ (ಮಹಾರಾಷ್ಟ್ರ): ಮರಾಠ ಮೀಸಲು ಹೋರಾಟಗಾರ ಮನೋಜ್‌ ಜಾರಂಜೆ ಗುರುವಾರ ತಮ್ಮ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದಾರೆ. ಆರು ದಿನಗಳಿಂದಲೂ ಜಾರಂಗೆ ಉಪವಾಸ ಮಾಡುತ್ತಿದ್ದ ಸ್ಥಳಕ್ಕೆ ಮಹಾರಾಷ್ಟ್ರದ ಸಚಿವ ಮತ್ತು ಮರಾಠ ಕೋಟಾ ಉಪಸಮಿತಿಯ ಸದಸ್ಯ ಶಂಭುರಾಜ್ ದೇಸಾಯಿ ಮೊದಲಾದವರು ಭೇಟಿ ನೀಡಿ ಉಪಹವಾಸ ಹಿಂಪಡೆಯುವಂತೆ ಮನವಿ ಮಾಡಿದರು. ಇದಕ್ಕೆ ಒಪ್ಪಿದ ಜಾರಂಗೆ ಸರ್ಕಾರಕ್ಕೆ ಒಂದು ತಿಂಗಳು ಗಡುವು ನೀಡುತ್ತೇವೆ. ತಿಂಗಳಲ್ಲಿ ನಮ್ಮ ಎಲ್ಲಾ ಬೇಡಿಕೆ ಈಡೇರಿಸದೇ ಇದ್ದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ನಿಲ್ಲಿಸಿ, ಗೆಲ್ಲಿಸುವ ಮೂಲಕ ನಮ್ಮ ಬೇಡಿಕೆ ಈಡೇರಿಸಿಕೊಳ್ಳುತ್ತೇವೆ ಎಂದು ಎಚ್ಚರಿಸಿದ್ದಾರೆ.

ಭಾರತದಂತೆ ನ್ಯಾಯಸಮ್ಮತ ಚುನಾವಣೆ ನಮ್ಮಲ್ಲಿ ಏಕೆ ಸಾಧ್ಯವಿಲ್ಲ?: ಪಾಕ್‌ ಸಂಸದ 

ಇಸ್ಲಾಮಾಬಾದ್‌: ನಮ್ಮ ಶತ್ರು (ಭಾರತ) ದೇಶದಂತೆ ನ್ಯಾಯಸಮ್ಮತ ಚುನಾವಣೆ ನಮ್ಮಲ್ಲಿ ಏಕೆ ನಡೆಸಲು ಸಾಧ್ಯವಿಲ್ಲ ಎಂದು ಪಾಕ್‌ ಸಂಸದ ಶಿಬ್ಲಿ ಫರಾಜ್‌ ಅವರು ಗುರುವಾರ ಪ್ರಶ್ನಿಸಿದ್ದಾರೆ. ಶತ್ರು ದೇಶದಲ್ಲಿ ಸಾರ್ವತ್ರಿಕ ಚುನಾವಣೆ ಮುಕ್ತಾಯವಾಗಿದೆ. ಲಕ್ಷಗಟ್ಟಲೇ ಮತಗಟ್ಟೆಗಳಲ್ಲಿ 90 ಕೋಟಿಗಿಂತಲೂ ಹೆಚ್ಚು ಮಂದಿ ಮತದಾನ ಮಾಡಿದ್ದಾರೆ. ಎಷ್ಟೋ ಲಕ್ಷಾಂತರ ವಿದ್ಯುನ್ಮಾನ ಯಂತ್ರಗಳನ್ನು ಬಳಸಿದ್ದಾರೆ. ಅಲ್ಲಿಯ ಯಾರೋಬ್ಬರೂ ಮತಯಂತ್ರಗಳಿಂದ ಮೋಸ ಆಗಿದೆ ಎಂದು ಹೇಳಿಲ್ಲಾ. ಆದರೆ ನಮ್ಮಲ್ಲಿ ಪ್ರತಿಬಾರಿಯು ಚುನಾವಣೆ ಫಲಿತಾಂಶ ತಿರುಚಿದ ಆರೋಪ ಕೇಳಿಬರುತ್ತಲೇ ಇರುತ್ತದೆ. ಆ ದೇಶದಂತೆ ನಮ್ಮಲ್ಲಿ ಏಕೆ ನ್ಯಾಯಸಮ್ಮತ ಚುನಾವಣೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದ್ದಾರೆ.

==

ಚಿಲ್ಲರೆ ಹಣದುಬ್ಬರ ಇಳಿಕೆ: ಸೆನ್ಸೆಕ್ಸ್‌, ನಿಫ್ಟಿ ಮಧ್ಯಂತರ, ಮುಕ್ತಾಯದ ಹೊಸ ದಾಖಲೆ

ಮುಂಬೈ: ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್‌ ಗುರುವಾರ 204 ಅಂಕ ಏರಿಕೆ ಕಂಡು 76810 ಅಂಕಗಳಲ್ಲಿ ಮುಕ್ತಾವಾಗಿದೆ. ಇದು ಸೆನ್ಸೆಕ್ಸ್‌ನ ಸಾರ್ವಕಾಲಿಕ ಗರಿಷ್ಠ ಮುಕ್ತಾಯದ ಅಂಕವಾಗಿದೆ. ಇನ್ನು ಮಧ್ಯಂತರ ಅವಧಿಯಲ್ಲಿ ಸೂಚ್ಯಂಕ 538 ಅಂಕ ಏರಿ 77145ರವರೆಗೆ ತಲುಪಿತ್ತು. ಇದು ಕೂಡಾ ಸಾರ್ವಕಾಲಿಕ ಗರಿಷ್ಠವಾಗಿದೆ. ಇನ್ನೊಂದೆಡೆ ನಿಫ್ಟಿ 76 ಅಂಕ ಏರಿಕೆ ಕಂಡು 23398ರಲ್ಲಿ ಅಂತ್ಯವಾಯಿತು. ಬುಧವಾರ ಪ್ರಕಟವಾದ ಚಿಲ್ಲರೆ ಹಣದುಬ್ಬರ ಪ್ರಮಾಣ ಶೇ.4.75ರಷ್ಟಿದ್ದು, ಒಂದು ವರ್ಷದಲ್ಲೇ ಕನಿಷ್ಠ ಎಂಬ ಮಾಹಿತಿ ಷೇರುಪೇಟೆಗೆ ಚೇತರಿಕೆ ನೀಡಿತು.

==

ಕಾಶ್ಮೀರದ ಶಾಲೆಗಳಲ್ಲಿ ರಾಷ್ಟ್ರಗೀತೆ ಗಾಯನ ಕಡ್ಡಾಯಕ್ಕೆ ಸುತ್ತೋಲೆ

ಶ್ರೀನಗರ: ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ ಎಲ್ಲಾ ಶಾಲೆಗಳಲ್ಲೂ ಬೆಳಗ್ಗಿನ ಪ್ರಾರ್ಥನೆಯಲ್ಲಿ ರಾಷ್ಟ್ರಗೀತೆ ಹಾಡುವುದನ್ನು ಜಮ್ಮು ಮತ್ತು ಕಾಶ್ಮೀರದ ಶಿಕ್ಷಣ ಇಲಾಖೆ ಕಡ್ಡಾಯಗೊಳಿಸಿ ಗುರುವಾರ ಆದೇಶ ಹೊರಡಿಸಿದೆ. ರಾಜ್ಯದ ವಿವಿಧ ಶಾಲೆಗಳಲ್ಲಿ ರಾಷ್ಟ್ರಗೀತೆ ಹಾಡುತ್ತಿಲ್ಲ ಎಂಬ ವಿಷಯ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈ ಕುರಿತು ಸುತ್ತೋಲೆ ಹೊರಡಿಸಲಾಗಿದೆ. ಶಾಲೆಯಲ್ಲಿ ಬೆಳಗ್ಗೆಯ ಪ್ರಾರ್ಥನೆಯಲ್ಲಿ ರಾಷ್ಟ್ರಗೀತೆಯನ್ನು ಕಡ್ಡಾಯವಾಗಿ ಹಾಡಬೇಕು. ಇದರಿಂದ ವಿದ್ಯಾರ್ಥಿಗಳಲ್ಲಿ ಏಕತೆ ಮತ್ತು ಶಿಸ್ತು ಹೆಚ್ಚಾಗಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.