ಆದಾಯ ತೆರಿಗೆ ಇಲಾಖೆಯ ನೋಟಿಸ್‌ ಒಂದರಲ್ಲಿ ಕ್ಷೌರ, ಪರ್ಫ್ಯೂಂ, ಪಡಿತರ ವೆಚ್ಚ ಕೇಳಿದ ಇಲಾಖೆ!

| N/A | Published : Mar 01 2025, 01:06 AM IST / Updated: Mar 01 2025, 07:01 AM IST

ಸಾರಾಂಶ

ಆದಾಯ ತೆರಿಗೆ ಇಲಾಖೆಯ ನೋಟಿಸ್‌ ಒಂದರಲ್ಲಿ ತೆರಿಗೆದಾರರ ತೀರಾ ವೈಯಕ್ತಿಕ ಖರ್ಚುಗಳ ಬಗ್ಗೆ ಮಾಹಿತಿ ನೀಡುವಂತೆ ಕೇಳಲಾಗಿದ್ದು, ಇದರ ಪೋಸ್ಟ್‌ ಭಾರೀ ವೈರಲ್‌ ಆಗುತ್ತಿದೆ.

ನವದೆಹಲಿ: ಆದಾಯ ತೆರಿಗೆ ಇಲಾಖೆಯ ನೋಟಿಸ್‌ ಒಂದರಲ್ಲಿ ತೆರಿಗೆದಾರರ ತೀರಾ ವೈಯಕ್ತಿಕ ಖರ್ಚುಗಳ ಬಗ್ಗೆ ಮಾಹಿತಿ ನೀಡುವಂತೆ ಕೇಳಲಾಗಿದ್ದು, ಇದರ ಪೋಸ್ಟ್‌ ಭಾರೀ ವೈರಲ್‌ ಆಗುತ್ತಿದೆ.

ಆ ನೋಟಿಸ್‌ನಲ್ಲಿ, ತೆರಗೆದಾರರ ಬಳಿ ಪಡಿತರ ಸೇರಿದಂತೆ ಅವರು ಪ್ರತಿ ತಿಂಗಳು ಕ್ಷೌರ, ಪರ್ಫ್ಯೂಂ, ಪಡಿತರಕ್ಕೆ ಮಾಡುವ ವೆಚ್ಚ, ಬಳಸುವ ವಸ್ತುಗಳ ಪ್ರಮಾಣ ಹಾಗೂ ಅವುಗಳ ದರದ ಬಗ್ಗೆ ಕೇಳಲಾಗಿದೆ. ಇದಕ್ಕೆ ತೆರಿಗೆದಾರರು ಪ್ರತಿಕ್ರಿಯಿಸಿ, ‘ಅಸಹಜ ವೆಚ್ಚ ಕಂಡುಬಂದರೆ ನೋಟಿಸ್‌ ಸಹಜ. ಆದರೆ ತೀರಾ ವೈಯಕ್ತಿಕ ವೆಚ್ಚದ ವಿವರ ಕೇಳಿದ್ದು ಸರಿಯಲ್ಲ’ ಎಂದಿದ್ದಾರೆ.

ಈ ಪ್ರಶ್ನೆಗಳೇಕೆ?:ನಿಯಮಾನುಸಾರ ತೆರಿಗೆ ಕಟ್ಟುವಿಕೆ ಹಾಗೂ ವರದಿಯಾಗದ ಆದಾಯಗಳನ್ನು ಗುರುತಿಸುವ ಸಲುವಾಗಿ, ಆದಾಯ ಹಾಗೂ ವೆಚ್ಚಗಳನ್ನು ಹೋಲಿಸಲಾಗುತ್ತದೆ. ತೆರಿಗೆ ಅಧಿಕಾರಿಗಳು ತೆರಿಗೆದಾರರ ಹಣಕಾಸು ವ್ಯವಹಾರ ಸೇರಿದಂತೆ ವಿವಿಧ ಬ್ಯಾಂಕ್‌ ದಾಖಲೆಗಳನ್ನು ಪರಿಶೀಲಿಸುತ್ತಾರೆ.

ವರದಿಗಳಲ್ಲಿ ಉಲ್ಲೇಖಿಸಲಾಗಿದ್ದಕ್ಕಿಂತ ಅಧಿಕ ವೆಚ್ಚ ಕಂಡುಬಂದಲ್ಲಿ, ವೈದ್ಯಕೀಯ ರಸೀದಿಗಳು, ವಿದೇಶಿ ಪ್ರಯಾಣ, ಸಾಮಾನ್ಯ ಜೀವನಶೈಲಿ ವೆಚ್ಚ, ಹೂಡಿಕೆ ಸೇರಿ, ಖರ್ಚುಗಳ ವಿಸ್ತೃತ ಮಾಹಿತಿಯನ್ನು ಕೊಡುವುದು ಅಗತ್ಯ. ಇದರಿಂದ ವ್ಯಕ್ತಿಯ ಆದಾಯದ ಮೂಲಗಳ ಬಗ್ಗೆ ತಿಳಿಯಲು ಅನುಕೂಲವಾಗುತ್ತದೆ. ತೆರಿಗೆದಾರರ ಆದಾಯ ಹಾಗೂ ವೆಚ್ಚಗಳ ನಡುವೆ ಅಸಹಜ ವ್ಯತ್ಯಾಸಗಳು ಕಂಡುಬಂದಲ್ಲಿ ತನಿಖೆ ನಡೆಸಲಾಗುವುದು. ಆದರೆ ತೀರಾ ವೈಯಕ್ತಿಕ ವೆಚ್ಚಗಳ ವಿವರಗಳನ್ನು ಕೇಳುವುದು ಗೌಪ್ಯತೆಯ ಬಗ್ಗೆ ಕಳವಳ ವ್ಯಕ್ತವಾಗುವಂತೆ ಮಾಡುತ್ತದೆ ಎಂದು ತೆರಿಗೆದಾರರು ಹೇಳಿದ್ದಾರೆ.