ಸಾರಾಂಶ
ನವದೆಹಲಿ: ಭಾರತದ 5ನೇ ತಲೆಮಾರಿನ ಸ್ಟೆಲ್ತ್ ವಿಮಾನ ಎಎಂಸಿಎಗೆ ಭಾರತದಲ್ಲಿಯೇ ಎಂಜಿನ್ ತಯಾರಾಗಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ಫ್ರಾನ್ಸ್‌ನ ಸಫ್ರಾನ್ ಕಂಪನಿಯ ಸಹಭಾಗಿತ್ವದಲ್ಲಿ ಭಾರತದಲ್ಲಿಯೇ 120 ಕೆಎನ್ (ಕಿಲೋನ್ಯೂಟನ್) ಎಂಜಿನ್‌ಗಳು ಉತ್ಪಾದನೆಯಾಗಲಿವೆ.
ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಸಿಂಗ್, ‘ಭಾರತದಲ್ಲಿಯೇ 5ನೇ ತಲೆಮಾರಿನ ಯುದ್ಧ ವಿಮಾನದ ಎಂಜಿನ್ ತಯಾರಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದೇವೆ. ಫ್ರಾನ್ಸ್‌ನ ಸಫ್ರಾನ್ ಕಂಪನಿಯು ಎಂಜಿನ್ ತಯಾರಿಯ ಕೆಲಸ ಆರಂಭಿಸಲಿದೆ’ ಎಂದು ತಿಳಿಸಿದ್ದಾರೆ.
ಮೂಲಗಳ ಪ್ರಕಾರ 120 ಕಿಎನ್ ಎಂಜಿನ್ ತಯಾರಿಗೆ ಅಧಿಕೃತ ಮಾತುಕತೆಯು ಆರಂಭವಾಗಲಿದೆ. ಹೊಸ ಎಂಜಿನ್ ಅಭಿವೃದ್ಧಿಗೆ 10 ವರ್ಷ ಹಿಡಿಯಲಿದ್ದು, ಆ ಬಳಿಕ ಅದರ ಉತ್ಪಾದನೆಯಾಗಲಿದೆ. ನಂತರ ಎಎಂಸಿಎ 2ನೇ ಆವೃತ್ತಿಯ ವಿಮಾನಗಳಿಗೆ ಅಳವಡಿಸಲಾಗುತ್ತದೆ. ಮೊದಲ ಆವೃತ್ತಿಗಳಿಗೆ ಅಮೆರಿಕದ ಜನರಲ್ ಎಲೆಕ್ಟ್ರಿಕ್ಸ್ 414 ಎಂಜಿನ್ ಅಳವಿಡಿಸಲಾಗುತ್ತದೆ ಎನ್ನಲಾಗಿದೆ.
ಬ್ರಿಟನ್‌ನ ರೋಲ್ಸ್ ರಾಯ್ಸ್, ಅಮೆರಿಕದ ಜಿಇ ಕಂಪನಿಗಳ ನಡುವೆ ಸಫ್ರಾನ್ ಕಂಪನಿಯು ಎಂಜಿನ್ ತಯಾರಿಸುವ ಬಿಡ್ ಗೆದ್ದ ಬಳಿಕ ಈ ಎಲ್ಲಾ ಕೆಲಸಗಳು ಗರಿಗೆದರಿವೆ.
ಇದೇ ಕಂಪನಿಯು ಹೈದರಾಬಾದ್‌ನಲ್ಲಿ ರಫೇಲ್ ಎಂ88 ಯುದ್ಧ ವಿಮಾನಗಳಿಗೆ ಎಂಆರ್‌ಒ ಸೆಂಟರ್ ಅನ್ನು ತೆರೆಯುತ್ತಿದೆ. ಇದು ಫ್ರಾನ್ಸ್ ಹೊರಗೆ ಮೊದಲ ಕೇಂದ್ರವಾಗಿದೆ.