ದೇಶ ನಡೆಸೋದು ಮಕ್ಕಳಾಟ ಅಲ್ಲ: ನರೇಂದ್ರ ಮೋದಿ

| Published : May 17 2024, 12:31 AM IST / Updated: May 17 2024, 06:27 AM IST

ಸಾರಾಂಶ

: ಕಷ್ಟಪಟ್ಟು ಕೆಲಸ ಮಾಡದ ರಾಜಕುಮಾರರು ತನ್ನಿಂದ ತಾನೇ ಫಟಾಫಟ್‌ ಎಂದು ದೇಶ ಅಭಿವೃದ್ಧಿಯಾಗುವ ಕನಸು ಕಾಣುತ್ತಿದ್ದಾರೆ.

ಪ್ರತಾಪಗಢ: ಕಷ್ಟಪಟ್ಟು ಕೆಲಸ ಮಾಡದ ರಾಜಕುಮಾರರು ತನ್ನಿಂದ ತಾನೇ ಫಟಾಫಟ್‌ ಎಂದು ದೇಶ ಅಭಿವೃದ್ಧಿಯಾಗುವ ಕನಸು ಕಾಣುತ್ತಿದ್ದಾರೆ. ಆದರೆ ದೇಶ ನಡೆಸುವುದು ಮಕ್ಕಳ ಆಟ ಅಲ್ಲ ಎಂಬುದನ್ನು ಅವರು ನೆನಪಿನಲ್ಲಿಡಬೇಕು ಎಂದು ರಾಹುಲ್‌ ಗಾಂಧಿ ವಿರುದ್ಧ ಪ್ರಧಾನಿ ಮೋದಿ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ಮಂಗಳವಾರ ರಾಹುಲ್‌ ಗಾಂಧಿ ಇಂಡಿಯಾ ಕೂಟ ಅಧಿಕಾರಕ್ಕೆ ಬಂದ ಕೂಡಲೇ ಫಟಾಫಟ್‌ ಎಂದು ಎಲ್ಲ ಗೃಹಿಣಿಯರಿಗೆ ನ್ಯಾಯ ಯೋಜನೆಯಡಿ 1 ಲಕ್ಷ ರು. ಹಾಕುವುದಾಗಿ ತಿಳಿಸಿದ್ದರು.

ಈ ಕುರಿತು ಉತ್ತರಪ್ರದೇಶದ ಪ್ರತಾಪ್‌ಗಢದಲ್ಲಿ ಗುರುವಾರ ನಡೆದ ರ್‍ಯಾಲಿಯಲ್ಲಿ ಮಾತನಾಡಿದ ಮೋದಿ, ‘ಫಟಾಫಟ್‌ ಎಂದು ಬಡತನವನ್ನು ಭಾರತದಿಂದ ನಿರ್ಮೂಲನೆ ಮಾಡುವುದಾಗಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳುತ್ತಾರೆ. ಅದೇ ರೀತಿ ಅವರನ್ನು ರಾಯ್‌ಬರೇಲಿಯ ಜನತೆ ಕೂಡ ಫಟಾಫಟ್‌ ಎಂದು ಜೂ.4ರಂದು ಓಡಿಸುತ್ತಾರೆ. ಬಳಿಕ ರಾಹುಲ್‌ ಮತ್ತು ಅಖಿಲೇಶ್ ತಮ್ಮ ಬೇಸಿಗೆ ವಿಹಾರಕ್ಕೆ ವಿದೇಶಕ್ಕೆ ಹಾರುತ್ತಾರೆ. ಇತ್ತ ಪ್ರತಿಪಕ್ಷಗಳ ಇಂಡಿಯಾ ಕೂಟ ಒಡೆದು ಹೋಗಿ ತಮ್ಮ ಸೋಲಿಗೆ ಬಲಿಪಶುವಾಗಿ ನಾಯಕರೊಬ್ಬರಿಗೆ ಹಣೆಪಟ್ಟಿ ಕಟ್ಟಲಾಗುತ್ತದೆ’ ಎಂದು ತಿಳಿಸಿದರು.

ಮೋದಿ ಗ್ಯಾರಂಟಿ: ಇದೇ ವೇಳೆ ಮೋದಿ ಗ್ಯಾರಂಟಿಯ ಕುರಿತು ಮಾತನಾಡುತ್ತಾ, ‘ಸ್ವಾತಂತ್ರ್ಯ ಬಂದಾಗ ನಮ್ಮ ದೇಶ ಆರನೇ ಅತಿದೊಡ್ಡ ಆರ್ಥಿಕತೆಯಾಗಿತ್ತು. ಆದರೆ ಕಾಂಗ್ರೆಸ್‌ ತನ್ನ ಭ್ರಷ್ಟಾಚಾರ ಮತ್ತು ಲೂಟಿಯಿಂದ ಅದನ್ನು 11ನೇ ಸ್ಥಾನಕ್ಕೆ ತಂದು ನಿಲ್ಲಿಸಿದೆ. ನಮ್ಮ ಕಠಿಣ ಪರಿಶ್ರಮದಿಂದ ಭಾರತ ಇಂದು 5ನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಮುಂದಿನ 5 ವರ್ಷದೊಳಗೆ ಅದನ್ನು ಮೂರನೇ ಅತಿದೊಡ್ಡ ಆರ್ಥಿಕತೆ ಮಾಡುವುದಾಗಿ ಮೋದಿ ಗ್ಯಾರಂಟಿ ನೀಡುತ್ತೇನೆ’ ಎಂದು ಭರವಸೆ ನೀಡಿದರು.