ಸಾರಾಂಶ
2020ರಲ್ಲಿ ಲಡಾಖ್‌ನ ಗಲ್ವಾನ್ ಪ್ರದೇಶದಲ್ಲಿ ಭಾರೀ ಸಂಘರ್ಷಕ್ಕೆ ಕಾರಣವಾಗಿದ್ದ ಗಡಿ ವಿವಾದ ಸಂಬಂಧ ಮಹತ್ವದ ಒಪ್ಪಂದವೊಂದಕ್ಕೆ ಬರುವಲ್ಲಿ ಭಾರತ ಮತ್ತು ಚೀನಾ ಯಶಸ್ವಿಯಾಗಿವೆ.
ನವದೆಹಲಿ : 2020ರಲ್ಲಿ ಲಡಾಖ್‌ನ ಗಲ್ವಾನ್ ಪ್ರದೇಶದಲ್ಲಿ ಭಾರೀ ಸಂಘರ್ಷಕ್ಕೆ ಕಾರಣವಾಗಿದ್ದ ಗಡಿ ವಿವಾದ ಸಂಬಂಧ ಮಹತ್ವದ ಒಪ್ಪಂದವೊಂದಕ್ಕೆ ಬರುವಲ್ಲಿ ಭಾರತ ಮತ್ತು ಚೀನಾ ಯಶಸ್ವಿಯಾಗಿವೆ. ಅದರನ್ವಯ ಲಡಾಖ್‌ನ 2 ವಿವಾದಿತ ಪ್ರದೇಶಗಳಲ್ಲಿ ಜಂಟಿ ಗಸ್ತು ನಡೆಸಲು ಉಭಯ ದೇಶಗಳು ಸಮ್ಮತಿಸಿವೆ. ಇದು 4 ವರ್ಷಗಳ ಬಳಿಕ ಭಾರತ ಮತ್ತು ಚೀನಾ ನಡುವಿನ ಗಡಿ ಸಂಘರ್ಷ ತಣಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎನ್ನಲಾಗಿದೆ.
ಅದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವ ಎಸ್. ಜೈಶಂಕರ್, ‘ಇದೊಂದು ಉತ್ತಮ ಬೆಳವಣಿಗೆ. ಇದರ ಫಲವಾಗಿ 2020ರಲ್ಲಿ ಭಾರತ ಮತ್ತು ಚೀನಾ ದೇಶಗಳ ಯೋಧರು ಯಾವ ಪ್ರದೇಶಗಳಲ್ಲಿ ಗಸ್ತು ತಿರುತ್ತಿದ್ದರೋ ಅದೇ ಪ್ರದೇಶಗಳಲ್ಲಿ ಅವರ ಚಟುವಟಿಕೆ ಮುಂದುವರೆಸಲು ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಪ್ರಧಾನಿ ಕ್ಸಿ ಜಿನ್‌ಪಿಂಗ್, ರಷ್ಯಾದಲ್ಲಿ ನಡೆಯುತ್ತಿರುವ ಬ್ರಿಕ್ಸ್ ದೇಶಗಳ ಸಭೆಯಲ್ಲಿ ಮುಖಾಮುಖಿಯಾಗುವ ಮುನ್ನ ಇಂಥದ್ದೊಂದು ಬೆಳವಣಿಗೆ ಸುದ್ದಿ ಹೊರಬಿದ್ದಿದೆ.
ಜುಲೈನಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ನಡುವಿನ 2 ನಿರ್ಣಾಯಕ ಸಭೆಗಳು, 31 ಸುತ್ತಿನ ರಾಜತಾಂತ್ರಿಕ ಸಭೆಗಳು ಮತ್ತು 4 ವರ್ಷಗಳಲ್ಲಿ ನಡೆದ 21 ಸುತ್ತಿನ ಮಿಲಿಟರಿ ಮಾತುಕತೆಗಳ ಫಲ ಇದಾಗಿದೆ ಎಂದು ವರದಿಗಳು ತಿಳಿಸಿವೆ.
ಸೋಮವಾರ ಈ ಕುರಿತು ಘೋಷಣೆ ಮಾಡಿದ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಸೂರಿ, ‘2 ಗಡಿಭಾಗಗಳಲ್ಲಿ ಜಂಟಿ ಗಸ್ತು ತಿರುಗಲು ಭಾರತ-ಚೀನಾ ಸಮ್ಮತಿಸಿವೆ. ಇದು ಗಡಿಯಲ್ಲಿನ ಸೇನಾ ಹಿಂತೆಗೆತದತ್ತ ಪ್ರಮುಖ ಹೆಜ್ಜೆ. ಮುಂದಿನ ಸುತ್ತಿನ ಮಾತುಕತೆಗಳು ಸೇನಾ ಹಿಂತೆಗೆತದತ್ತ ಗಮನ ಕೇಂದ್ರೀಕರಿಸಲಿವೆ’ ಎಂದರು.
ಸಂಘರ್ಷ ಹೇಗೆ ತಣಿಯಲಿದೆ?:
2020ರಲ್ಲಿ ಲಡಾಖ್‌ನ ಗಲ್ವಾನ್ ಗಡಿಯಲ್ಲಿ ಭಾರತ-ಚೀನಾ ಸೈನಿಕರು ಸಂಘರ್ಷ ನಡೆಸಿದ್ದರು. ನಂತರ ಒಟ್ಟು 7 ಗಡಿಭಾಗದಲ್ಲಿ ಸಂಘರ್ಷ ಏರ್ಪಟ್ಟಿತ್ತು. ನಂತರ ನಡೆದ ಹಲವು ಸುತ್ತಿನ ಮಾತುಕತೆಗಳ ಬಳಿಕ 5 ಗಡಿಗಳಲ್ಲಿ ಚೀನಾ ಹಿಂತೆಗೆತ ಆಗಿತ್ತು. ಆದರೆ ಡೆಮ್ಚೋಕ್ ಹಾಗೂ ಡೆಸ್ಪಾಂಗ್‌ನಿಂದ ಚೀನಾ ಸೇನೆ ಹಿಂಪಡೆದಿರಲಿಲ್ಲ. ಹೀಗಾಗಿ ಭಾರತದ ಗಡಿಯನ್ನು ಚೀನಾ ಆಕ್ರಮಿಸಿಕೊಂಡಿದೆ ಎಂದು ಕಾಂಗ್ರೆಸ್ ಪದೇ ಪದೇ ಮೋದಿ ಸರ್ಕಾರದ ಮೇಲೆ ಆರೋಪ ಮಾಡುತ್ತಿತ್ತು.
ಈಗ ಈಗ ಡೆಮ್ಚೋಕ್ ಹಾಗೂ ಡೆಸ್ಪಾಂಗ್‌ನಲ್ಲಿ ಜಂಟಿ ಗಸ್ತಿಗೆ ಭಾರತ-ಚೀನಾ ಸಮ್ಮತಿಸಿವೆ. ಹೀಗಾಗಿ ಸಂಘರ್ಷ ನಿಲ್ಲಲಿದೆ. ಮುಂದೆ ಸೇನಾ ಹಿಂತೆಗೆತಕ್ಕೆ ಇದು ಸಹಕಾರಿ ಆಗಲಿದೆ ಎಂದು ವಿಶ್ಲೇಷಿಸಲಾಗಿದೆ.
ಏಕಿದು ಮಹತ್ವದ್ದು?
- 2020ರಲ್ಲಿ ಲಡಾಖ್‌ನ 7 ಗಡಿಭಾಗದಲ್ಲಿ ಸಂಘರ್ಷ ಏರ್ಪಟ್ಟಿತ್ತು
- ನಂತರ ಮಾತುಕತೆ ಬಳಿಕ 5 ಗಡಿಗಳಲ್ಲಿ ಚೀನಾ ಹಿಂತೆಗೆತ ಆಗಿತ್ತು
- ಆದರೆ ಡೆಮ್ಚೋಕ್, ಡೆಸ್ಪಾಂಗ್‌ನಿಂದ ಚೀನಾ ಸೇನೆ ಹಿಂಪಡೆದಿರಲಿಲ್ಲ
- ಈಗ ಈ ಎರಡೂ ಕಡೆ ಜಂಟಿ ಗಸ್ತಿಗೆ ಭಾರತ-ಚೀನಾ ಅಸ್ತು
- ಜಂಟಿ ಗಸ್ತು ನಡೆದರೆ ಮುಂದೆ ಸೇನಾ ಹಿಂತೆಗೆತಕ್ಕೆ ಇದು ಸಹಕಾರಿ