ಸಾರಾಂಶ
ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಸ್ವಾಮಿನಾರಾಯಣ ಹಿಂದೂ ದೇಗುಲದ ಗೋಡೆಗಳ ಮೇಲೆ ಭಾರತ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕೀಳು ಬರಹಗಳನ್ನು ಗೀಚಿ ವಿರೂಪಗೊಳಿಸಲಾಗಿದೆ.
ನ್ಯೂಯಾರ್ಕ್: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಸ್ವಾಮಿನಾರಾಯಣ ಹಿಂದೂ ದೇಗುಲದ ಗೋಡೆಗಳ ಮೇಲೆ ಭಾರತ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕೀಳು ಬರಹಗಳನ್ನು ಗೀಚಿ ವಿರೂಪಗೊಳಿಸಲಾಗಿದೆ. ಲಾಸ್ ಎಂಜಲೀಸ್ ಬಳಿಯ ಸ್ಯಾನ್ ಬರ್ನಾರ್ಡಿನೊದ ಚಿನೋ ಹಿಲ್ಸ್‌ನಲ್ಲಿರುವ ಶ್ರೀ ಸ್ವಾಮಿನಾರಾಯಣ ಮಂದಿರದಲ್ಲಿ ಈ ದುಷ್ಕೃತ್ಯ ನಡೆಸಲಾಗಿದೆ.
ಕೃತ್ಯ ಯಾರು ಎಸಗಿದ್ದಾರೆ ಎಂಬ ಮಾಹಿತಿ ಇಲ್ಲ. ಆದರೆ ಅಮೆರಿಕದಲ್ಲಿ ಖಲಿಸ್ತಾನಿಗಳು ಜನಮತಗಣನೆ ಮಾಡುವ ದಿನ ಸಮೀಪಿಸುತ್ತಿರುವ ಹೊತ್ತಿನಲಲ್ಲೇ ಈ ಘಟನೆ ನಡೆದಿರುವ ಕಾರಣ ಅವರ ಮೇಲೆ ಶಂಕೆ ಇದೆ. ಇದರ ಬೆನ್ನಲ್ಲೇ ಭಾರತ ಸರ್ಕಾರ ಈ ಕೃತ್ಯವನ್ನು ಖಂಡಿಸಿದ್ದು, ದೇವಸ್ಥಾನಕ್ಕೆ ಭದ್ರತೆಗೆ ಆಗ್ರಹಿಸಿದೆ.
ಘಟನೆಯ ಮಾಹಿತಿ ನೀಡಿರುವ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ‘ಬೋಚಾಸನವಾಸಿ ಅಕ್ಷರ್ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ’ (ಬಿಎಪಿಎಸ್- ಬಾಪ್ಸ್), ‘ಹಿಂದೂ ಸಮುದಾಯ ದ್ವೇಷದ ವಿರುದ್ಧ ಧೃಡವಾಗಿ ನಿಂತಿದೆ. ಚಿನೋ ಹಿಲ್ಸ್ ಹಾಗೂ ದಕ್ಷಿಣ ಕ್ಯಾಲಿಫೋರ್ನಿಯಾದ ಸಮುದಾಯ ದ್ವೇಷ ಬೇರೂರಲು ಬಿಡುವುದಿಲ್ಲ. ನಮ್ಮ ಮಾನವೀಯತೆ ಮತ್ತು ನಂಬಿಕೆಯು ಶಾಂತಿ ಹಾಗೂ ಸಹಾನುಭೂತಿ ಮೇಲುಗೈ ಸಾಧಿಸುವುದನ್ನು ಖಚಿತಪಡಿಸುತ್ತದೆ’ ಎಂದಿದೆ. ಜತೆಗೆ ಖಲಿಸ್ತಾನಿಗಳ ಜನಮತಗಣನೆಗೂ ಮುನ್ನ ಈ ಘಟನೆ ನಡೆದಿರುವ ಕಾರಣ ಅವರ ಮೇಲೆ ಗುಮಾನಿ ವ್ಯಕ್ತಪಡಿಸಿದೆ,
ಇತ್ತೀಚೆಗೆ 10 ದೇಗುಲ ಮೇಲೆ ದಾಳಿ:
ಕಳೆದ ಕೆಲ ವರ್ಷಗಳಲ್ಲಿ 10 ಹಿಂದೂ ದೇವಸ್ಥಾನಗಳ ಮೇಲೆ ದಾಳಿ ನಡೆಸಲಾಗಿದೆ ಅಥವಾ ದೋಚಲಾಗಿದೆ ಎಂದು ಉತ್ತರ ಅಮೆರಿಕಾದ ಹಿಂದೂಗಳ ಒಕ್ಕೂಟ ಮಾಹಿತಿ ನೀಡಿದೆ. 2024ರ ಸೆಪ್ಟೆಂಬರ್‌ನಲ್ಲಿ ಸ್ಯಾಕ್ರಮೆಂಟೊದಲ್ಲಿನ ಬಿಎಪಿಎಸ್ ದೇವಾಲಯದ ಗೋಡೆ ಮೇಲೆ ‘ಹಿಂದೂಗಳೇ ಹಿಂತಿರುಗಿ’ ಎಂದು ಬರೆಯಲಾಗಿತ್ತು.
ಭಾರತದಿಂದ ಖಂಡನೆ:
ಹಿಂದೂ ದೇಗುಲ ವಿರೂಪಗೊಳಿಸಿದ್ದನ್ನು ಖಂಡಿಸಿರುವ ಭಾರತ, ಈ ದುಷ್ಕೃತ್ಯದಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್ ಪ್ರತಿಕ್ರಿಯಿಸಿ, ‘ಇಂತಹ ಹೇಯ ಕೃತ್ಯಗಳನ್ನು ತೀವ್ರವಾಗಿ ಖಂಡಿಸುತ್ತೇವೆ. ಇದರಲ್ಲಿ ತೊಡಗಿರುವವರ ವಿರುದ್ಧ ಸ್ಥಳೀಯ ಕಾನೂನು ಜಾರಿ ಅಧಿಕಾರಿಗಳು ಕಠಿಣ ಕ್ರಮ ಕೈಗೊಂಡು, ದೇವಸ್ಥಾನಕ್ಕೆ ಸೂಕ್ತ ಭದ್ರತೆ ಒದಗಿಸಬೇಕು’ ಎಂದ ಆಗ್ರಹಿಸಿದ್ದಾರೆ.