ಸಾರಾಂಶ
ನವದೆಹಲಿ: ಸೇನೆಯ ಮೂರೂ ವಿಭಾಗಗಳ ಸಾಮರ್ಥ್ಯವನ್ನು ಒಗ್ಗೂಡಿಸಿ, ಸೇನೆಯನ್ನು ಯುದ್ಧ ಮತ್ತು ಇತರೆ ಕಾರ್ಯಾಚರಣೆಗೆ ಸನ್ನದ್ಧ ಸ್ಥಿತಿಯಲ್ಲಿ ಇಡುವ ‘ಸಂಯೋಜಿತ ಸೇನಾ ಕಮಾಂಡ್’ ವ್ಯವಸ್ಥೆಯ ಕನಸನ್ನು ಈ ವರ್ಷ ಜಾರಿಗೊಳಿಸುವ ವಿಶ್ವಾಸವನ್ನು ರಕ್ಷಣಾ ಇಲಾಖೆ ವ್ಯಕ್ತಪಡಿಸಿದೆ.
ಸೇನೆಯ ಮೂರೂ ವಿಭಾಗಗಳ ನಡುವೆ ಸಹಕಾರ ವೃದ್ಧಿಸುವ ಹಾಗೂ ಸೇನೆಯ ತಂತ್ರಜ್ಞಾನ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ 2025ನೇ ವರ್ಷವನ್ನು ‘ಸೇನಾ ಸುಧಾರಣಾ ವರ್ಷ’ ಎಂದು ರಕ್ಷಣಾ ಇಲಾಖೆ ಘೋಷಿಸಿದೆ. ಈ ನಿಟ್ಟಿನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆದಿದ್ದು, ಸೇನಾ ವ್ಯವಸ್ಥೆಯಲ್ಲಿ 9 ಸುಧಾರಣೆಗಳನ್ನು ತರಲು ನಿರ್ಧರಿಸಲಾಗಿದೆ.ಇದರ ಭಾಗವಾಗಿ ಸಂಯೋಜಿತ ಸೇನಾ ಪಡೆ ಸ್ಥಾಪಿಸುವ ಬಗ್ಗೆ ಚರ್ಚಿಸಲಾಯಿತು. ಇದರ ಪ್ರಕಾರ ಪ್ರತಿ ಕಮಾಂಡ್ ಭೂಸೇನೆ, ವಾಯುಪಡೆ ಹಾಗೂ ನೌಕಾಪಡೆಯ ತುಕಡಿಗಳನ್ನು ಒಗ್ಗೂಡಿಸಿ, ಒಂದೇ ಘಟಕವಾಗಿ ನಿಯೋಜಿಸಲಾಗುವುದು. ಜತೆಗೆ, ಭಾರತೀಯ ಸಂಸ್ಕೃತಿ ಹಾಗೂ ವಿಚಾರಗಳ ಬಗ್ಗೆ ವಿಶ್ವಾಸ ವೃದ್ಧಿಸುವುದು, ಸ್ವದೇಶಿ ಸಾಮರ್ಥ್ಯಗಳ ಮೂಲಕ ಜಾಗತಿಕ ಮಾನದಂಡಗಳನ್ನು ತಲುಪುವುದು, ರಾಷ್ಟ್ರದ ಪರಿಸ್ಥಿತಿಗೆ ಹೊಂದುವ ಆಧುನಿಕ ಸೇನಾ ಅಭ್ಯಾಸಗಳ ಅಳವಡಿಕೆಯ ಕಡೆಗೂ ಗಮನ ಹರಿಸಲಾಗಿದೆ. ವ್ಯಾಪಾರವನ್ನು ಸರಳಗೊಳಿಸುವ ಮೂಲಕ ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವವನ್ನು ಹೆಚ್ಚಿಸುವುದೂ ಇದರ ಉದ್ದೇಶವಾಗಿದೆ.
ಸಭೆಯಲ್ಲಿ ಮಾತನಾಡಿದ ಸಿಂಗ್, ‘ಈ ಸುಧಾರಣಾ ವರ್ಷವು ಸೇನೆಯ ಆಧುನೀಕರಣದ ಕಡೆಗಿನ ಮಹತ್ವದ ಹೆಜ್ಜೆಯಾಗಿದೆ. 21ನೇ ಶತಮಾನದ ಎಲ್ಲಾ ಸವಾಲುಗಳ ನಡುವೆ ದೇಶದ ಭದ್ರತೆ ಹಾಗೂ ಸಾರ್ವಭೌಮತೆ ಕಾಪಾಡಲು ಹಾಗೂ ಸದಾ ಸಿದ್ಧವಾಗಿರಲು ಸಹಕಾರಿಯಾಗಲಿದೆ’ ಎಂದರು.‘2025ರಲ್ಲಿ ಸೈಬರ್, ಬಾಹ್ಯಾಕಾಶ, ಕೃತಕ ಬುದ್ಧಿಮತ್ತೆ, ಮಷಿನ್ ಲರ್ನಿಂಗ್, ಹೈಪರ್ಸಾನಿಕ್, ರೊಬೋಟಿಕ್ಸ್ ಸೇರಿದಂತೆ ಹೊಸ ಕ್ಷೇತ್ರಗಳತ್ತ ಸೇನೆ ಗಮನ ಹರಿಸಲಿದೆ. ಸೈನ್ಯದ ತಾಂತ್ರಿಕ ಅಭಿವೃದ್ಧಿ, ಯುದ್ಧ ಸನ್ನದ್ಧತೆ, ಸಂಯೋಜಿತ ಸೇನಾ ಪಡೆ ಸ್ಥಾಪನೆ ಹಾಗೂ ತರಬೇತಿಗೆ ಶ್ರಮಿಸಲಾಗುವುದು. ಭಾರತವನ್ನು ಸೇನಾ ಉಪಕರಣಗಳ ರಫ್ತುದಾರ ದೇಶವಾಗಿಸುವುದು, ಸಂಶೋಧನೆ ಹಾಗೂ ಅಭಿವೃದ್ಧಿಗೆ ಪ್ರೋತ್ಸಾಹ, ವಿದೇಶಿ ಉಪಕರಣ ತಯಾರಕ ಕಂಪನಿಗಳೊಂದಿಗೆ ಭಾರತೀಯ ಕೈಗಾರಿಕೆಗಳ ಸಹಭಾಗಿತ್ವವನ್ನು ಉತ್ತೇಜಿಸುವ ಉದ್ದೇಶವಿದೆ’ ಎಂದು ಇಲಾಖೆ ಹೇಳಿಕೆ ಬಿಡುಗಡೆ ಮಾಡಿದೆ.