ಸಾರಾಂಶ
ಕೆನಡಾದಲ್ಲಿದ್ದುಕೊಂಡು ಖಲಿಸ್ತಾನಿ ಪರ ಚಟುವಟಿಗೆ, ಭಾರತದಲ್ಲಿ ಉಗ್ರ ಕೃತ್ಯ ನಡೆಸುತ್ತಿದ್ದ ಲಖ್ಬೀರ್ ಸಿಂಗ್ ಲಂಡಾನನ್ನು ಕೇಂದ್ರ ಗೃಹ ಸಚಿವಾಲಯ ಉಗ್ರ ಪಟ್ಟ ನೀಡಿದೆ. ಈತ ಪಂಜಾಬ್‌ನ ತರಣ್‌ತಾರಣ್ ಜಿಲ್ಲೆಯವನಾಗಿದ್ದಾನೆ.
ನವದೆಹಲಿ: ಖಲಿಸ್ತಾನಿ ಉಗ್ರ ನಿಜ್ಜರ್ ಹತ್ಯೆ ವಿಚಾರವಾಗಿ ಭಾರತ ಕೆನಡಾ ಸಂಬಂಧ ಹಳಸಿದ ನಡುವೆಯೇ ಕೇಂದ್ರ ಗೃಹ ಸಚಿವಾಲಯವು ಕೆನಡಾ ಮೂಲದ ಮತ್ತೊಬ್ಬ ಖಲಿಸ್ತಾನಿಗೆ ಉಗ್ರಪಟ್ಟ ಕಟ್ಟಿದೆ. ಗ್ಯಾಂಗ್‌ಸ್ಟರ್ ಲಖ್ಬಿರ್ ಸಿಂಗ್ ಲಂಡಾನನ್ನು ಭಯೋತ್ಪಾದಕ ಎಂದು ಕೇಂದ್ರ ಸರ್ಕಾರ ಘೋಷಿಸಿದೆ.
ಲಂಡಾ, ಪಂಜಾಬ್‌ನ ತರಣ್ ತರಣ್ ಜಿಲ್ಲೆಯವನಾಗಿದ್ದು, ಅಲ್ಲಿ ಮನೆ ಹಾಗೂ ಆಸ್ತಿ ಪಾಸ್ತಿ ಹೊಂದಿದ್ದಾನೆ. 2017ರಿಂದ ಕೆನಡಾದ ಎಡ್ಮಂಟನ್‌ನಲ್ಲಿ ವಾಸಿಸುತ್ತಿದ್ದಾನೆ.ಈತ ಖಲಿಸ್ತಾನಿ ಉಗ್ರ ಸಂಘಟನೆ ಬಬ್ಬರ್ ಖಾಲ್ಸಾ ಸಂಘಟನೆಯ ಸದಸ್ಯನಾಗಿದ್ದು, 2022ರಲ್ಲಿ ಪಂಜಾಬ್‌ನ ಮೊಹಾಲಿಯಲ್ಲಿರುವ ಪಂಜಾಬ್ ಪೊಲೀಸರ ಗುಪ್ತಚರ ಕಚೇರಿ ಸ್ಫೋಟದಲ್ಲಿ ಪ್ರಮುಖ ಆರೋಪಿ.ಜೊತೆಗೆ ಪಂಜಾಬ್‌ನ ಪೊಲೀಸ್ ಠಾಣೆ ಮೇಲಿನ ದಾಳಿಯಲ್ಲಿಯೂ ಆರೋಪಿಯಾಗಿದ್ದ. ಜೊತೆಗೆ ಭಾರತದ ನಾನಾ ಭಾಗಗಳಲ್ಲಿ ಉಗ್ರ ಕಾರ್ಯ ನಡೆಸುತ್ತಿದ್ದ. ಇದರೊಂದಿಗೆ ವಿದೇಶಗಳಿಂದ ಅತ್ಯಾಧುನಿಕ ಶಸ್ತ್ರಗಳ ಪೂರೈಕೆ, ದರೋಡೆ, ಸುಲಿಗೆ, ಕೊಲೆ, ಮಾದಕ ವಸ್ತುಗಳ ಸಾಗಾಟ ಸೇರಿ ಹಲವು ದುಷ್ಕೃತ್ಯಗಳಲ್ಲಿ ಭಾಗಿಯಾಗಿದ್ದ.
ಇವನ ಪಂಜಾಬ್ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಆಗಸ್ಟ್‌ನಲ್ಲಿ ಎನ್‌ಐಎ ವಿಶೇಷ ನ್ಯಾಯಾಲಯ ಆದೇಶಿಸಿತ್ತು.