ಸಾರಾಂಶ
ವಿಶ್ವಸಂಸ್ಥೆ : 2024ನೇ ಹಣಕಾಸು ವರ್ಷದಲ್ಲಿ ಭಾರತ ಶೇ.6.2ರಷ್ಟು ಬೆಳವಣಿಗೆ ದರ ದಾಖಲಿಸಲಿದೆ ಎಂದು ಜನವರಿಯಲ್ಲಷ್ಟೇ ಭವಿಷ್ಯ ನುಡಿದಿದ್ದ ವಿಶ್ವಸಂಸ್ಥೆ ಇದೀಗ ತನ್ನ ಅಂದಾಜನ್ನು ಮೇಲ್ಮುಖವಾಗಿ ಪರಿಷ್ಕರಿಸಿದೆ. ಭಾರತ ಈ ವರ್ಷ ಶೇ.6.9ರ ಪ್ರಗತಿ ದರವನ್ನು ಕಾಣಲಿದೆ ಎಂದು ಮಧ್ಯಂತರ ವರದಿಯೊಂದನ್ನು ಬಿಡುಗಡೆ ಮಾಡಿದೆ.
ಬಲಿಷ್ಠ ಪ್ರಮಾಣದ ಸಾರ್ವಜನಿಕ ಹೂಡಿಕೆ ಹಾಗೂ ಖಾಸಗಿ ಬಳಕೆ ವೆಚ್ಚದ ಪುಟಿದೇಳುವಿಕೆಯಿಂದಾಗಿ ಭಾರತದ ಜಿಡಿಪಿ ಶೇ.7ರ ಗಡಿಗೆ ತಲುಪಲಿದೆ ಎಂದು 2024ರ ಮಧ್ಯಭಾಗಕ್ಕೆ ಸಂಬಂಧಿಸಿದ ವಿಶ್ವ ಆರ್ಥಿಕ ಸ್ಥಿತಿಗತಿ ಹಾಗೂ ಸಂಭಾವ್ಯತೆ ಎಂಬ ವರದಿಯಲ್ಲಿ ತಿಳಿಸಿದೆ. ಈ ವರದಿ ಗುರುವಾರ ಬಿಡುಗಡೆಯಾಗಿದೆ.
2025ರಲ್ಲಿ ಭಾರತದ ಜಿಡಿಪಿ ಶೇ.6.2ರಷ್ಟು ಇರಲಿದೆ ಎಂದು ಜನವರಿಯಲ್ಲಿ ವಿಶ್ವಸಂಸ್ಥೆ ಹೇಳಿತ್ತು. 2024ನೇ ಸಾಲಿನ ಜಿಡಿಪಿ ದರವನ್ನು ವಿಶ್ವಸಂಸ್ಥೆ ಪರಿಷ್ಕರಣೆ ಮಾಡಿದೆಯಾದರೂ, 2025ರ ಜಿಡಿಪಿಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ ಎಂಬುದು ಗಮನಾರ್ಹ.
ಗ್ರಾಹಕ ಹಣದುಬ್ಬರ 2023ರಲ್ಲಿ ಶೇ.5.6ರಷ್ಟಿತ್ತು. ಅದು 2024ರಲ್ಲಿ ಶೇ.4.5ಕ್ಕೆ ಇಳಿಯಲಿದೆ. ತನ್ಮೂಲಕ ಮಧ್ಯಮಾವಧಿಯಲ್ಲಿ ಶೇ.2ರಿಂದ ಶೇ.6ರ ಮಿತಿಯಲ್ಲಿರಬೇಕೆಂಬ ಆರ್‌ಬಿಐನ ಆಶಯದಂತೆ ಇರಲಿದೆ ಎಂದು ವಿಶ್ವಸಂಸ್ಥೆಯ ತನ್ನ ವರದಿಯಲ್ಲಿ ಹೇಳಿದೆ.