ಸಾರಾಂಶ
ಭಾರತ ತನ್ನ ಅಭಿವೃದ್ಧಿಯ ವೇಗಕ್ಕೆ ಹೋಲಿಸಿದರೆ ಉದ್ಯೋಗ ಸೃಷ್ಟಿಯಲ್ಲಿ ಹಿಂದುಳಿದಿದೆ. ಹೀಗಾಗಿ ಅರ್ಹರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ 2030ರ ವೇಳೆಗೆ 14.8 ಕೋಟಿ ಹೊಸ ಉದ್ಯೋಗ ಸೃಷ್ಟಿಸುವ ಅಗತ್ಯವಿದೆ ಎಂದು ಐಎಂಎಫ್ ಉಪಾಧ್ಯಕ್ಷೆ ಗೀತಾ ಗೋಪಿನಾಥ್ ಹೇಳಿದ್ದಾರೆ.
ನವದೆಹಲಿ: ಭಾರತ ತನ್ನ ಅಭಿವೃದ್ಧಿಯ ವೇಗಕ್ಕೆ ಹೋಲಿಸಿದರೆ ಉದ್ಯೋಗ ಸೃಷ್ಟಿಯಲ್ಲಿ ಹಿಂದುಳಿದಿದೆ. ಹೀಗಾಗಿ ಅರ್ಹರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ 2030ರ ವೇಳೆಗೆ 14.8 ಕೋಟಿ ಹೊಸ ಉದ್ಯೋಗ ಸೃಷ್ಟಿಸುವ ಅಗತ್ಯವಿದೆ ಎಂದು ಐಎಂಎಫ್ ಉಪಾಧ್ಯಕ್ಷೆ ಗೀತಾ ಗೋಪಿನಾಥ್ ಹೇಳಿದ್ದಾರೆ.
ಡೆಲ್ಲಿ ಸ್ಕೂಲ್ ಆಫ್ ಎಕಾನಮಿಕ್ಸ್‌ನಲ್ಲಿ ಮಾತನಾಡಿದ ಅವರು,‘ಉದ್ಯೋಗ ಸೃಷ್ಟಿಯಲ್ಲಿ ಭಾರತವು ಮಿಕ್ಕ ಜಿ20 ರಾಷ್ಟ್ರಗಳಿಗಿಂತ ಹಿಂದುಳಿದಿದೆ. 2010ರಿಂದ ಭಾರತವು ಶೇ.6.6 ವೇಗದಲ್ಲಿ ಆರ್ಥಿಕ ಪ್ರಗತಿ ಸಾಧಿಸುತ್ತಿದೆ. ಆದರೆ ಭಾರತದಲ್ಲಿನ ಹೊಸ ಉದ್ಯೋಗ ಸೃಷ್ಟಿಯು ಕೇವಲ ಶೇ.2ರಲ್ಲಿದೆ ಎಂದು ವಿಷಾದಿಸಿದರು.ಭಾರತದ ಜನಸಂಖ್ಯೆ ಬೆಳವಣಿಗೆ ಅಂದಾಜಿಗೆ ಹೋಲಿಸಿದರೆ, 2030ರ ಒಳಗೆ ಅಂದರೆ ಇನ್ನು ಕೇವಲ 6 ವರ್ಷದಲ್ಲಿ 6-14 ಕೋಟಿ ಉದ್ಯೋಗವನ್ನು ಭಾರತ ಸೃಷ್ಟಿಸಬೇಕಿದೆ. ಇದಕ್ಕೆ ಪೂರಕವಾಗಿ ಭಾರತ ಸರ್ಕಾರವು ಯುವಕರಲ್ಲಿ ಹೆಚ್ಚು ಕೌಶಲ್ಯಾಧಾರಿತ ಶಿಕ್ಷಣವನ್ನು ನೀಡಬೇಕು ಅದಕ್ಕಾಗಿ ತನ್ನ ಶಿಕ್ಷಣ ನೀತಿಯನ್ನು ಬದಲಾಯಿಸಿಕೊಳ್ಳಬೇಕು. ದೇಶದಲ್ಲಿ ಖಾಸಗಿ ಬಂಡವಾಳ ಹೂಡಿಕೆ ಹೆಚ್ಚಿಸಬೇಕು, ಉದ್ಯಮ ಸ್ನೇಹಿ ವಾತಾವರಣ ನಿರ್ಮಾಣ ಜೊತೆಗೆ ತೆರಿಗೆ ನೀತಿಯನ್ನು ಪರಿಷ್ಕರಿಸಿಕೊಳ್ಳಬೇಕು ಎಂದು ಹೇಳಿದರು.