‘ಭಾರತವು ಇಂದು ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮುತ್ತಿದ್ದು, ಇಡೀ ವಿಶ್ವಕ್ಕೇ ಕಾರ್ಖಾನೆಯಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.

ನವದೆಹಲಿ: ‘ಭಾರತವು ಇಂದು ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮುತ್ತಿದ್ದು, ಇಡೀ ವಿಶ್ವಕ್ಕೇ ಕಾರ್ಖಾನೆಯಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.

ಎನ್‌ಎಕ್ಸ್‌ಟಿ ಸಮಾವೇಶದಲ್ಲಿ ನ್ಯೂಸ್‌ಎಕ್ಸ್‌ ವರ್ಲಡ್‌ ವಾಹಿನಿ ಉದ್ಘಾಟಿಸಿ ಮಾತನಾಡಿದ ಮೋದಿ, ‘ಸ್ಥಳೀಯವಾಗಿ ಉತ್ಪಾದಿಸುವ ಉತ್ಪನ್ನಗಳನ್ನು ಉತ್ತೇಜಿಸಲು ಶುರು ಮಾಡಿದ ವೋಕಲ್‌ ಫಾರ್‌ ಲೋಕಲ್‌ ಮತ್ತು ಲೋಕಲ್‌ ಫಾರ್‌ ಗ್ಲೋಬಲ್‌ ಅಭಿಯಾನ ಫಲ ಕೊಡುತ್ತಿದೆ. ನಾವಿಂದು ಕೇಲವ ಕಾರ್ಮಿಕ ವರ್ಗವಾಗಿ ಉಳಿದಿಲ್ಲ. ಭಾರತವು ಅಸಂಖ್ಯ ನಾವೀನ್ಯತೆ ಹಾಗೂ ಪರಿಹಾರಗಳನ್ನು ಹುಡುಕಿ ಅವನ್ನು ವಿಶ್ವಕ್ಕೆ ನೀಡುತ್ತಿದೆ. ಇಲ್ಲಿನ ಉತ್ಪನ್ನಗಳು ಜಾಗತಿಕ ಮಟ್ಟದಲ್ಲಿ ಮಾರಾಟವಾಗುತ್ತಿವೆ’ ಎಂದು ದೇಶದ ಉತ್ಪಾದನಾ ಕ್ಷೇತ್ರವನ್ನು ಕೊಂಡಾಡಿದರು.

‘ಜಾಗತಿಕ ಪೂರೈಕೆ ಸರಪಳಿಯಲ್ಲಿ ವಿಶ್ವಾಸಾರ್ಹ ಪಾಲುದಾರನಾಗುತ್ತಿರುವ ಭಾರತ ರಕ್ಷಣಾ ಉಪಕರಣಗಳು, ಇಲೆಕ್ಟ್ರಾನಿಕ್‌, ಆಟೋಮೊಬೈಲ್‌, ಸೆಮಿಕಂಡಕ್ಟರ್‌, ವಿಮಾನವಾಹಕ ನೌಕೆಗಳನ್ನು ಉತ್ಪಾದಿಸುತ್ತಿದೆ. ನಮ್ಮ ವಿಶೇಷ ಆಹಾರಗಳಾದ ಮಖಾನಾ, ಸಿರಿಧಾನ್ಯಗಳು, ಆಯುಷ್ ಉತ್ಪನ್ನ ಹಾಗೂ ಯೋಗವನ್ನು ವಿಶ್ವ ಸ್ವೀಕರಿಸುತ್ತಿದೆ’ ಎಂದ ಮೋದಿ, ‘ಭಾರತವು ಇಂಡೋವೇಟಿಂಗ್‌ನಲ್ಲಿ ತೊಡಗಿದೆ. ಅರ್ಥಾತ್‌, ಭಾರತೀಯ ರೀತಿಯಲ್ಲಿ ಆವಿಷ್ಕರಿಸುತ್ತಿದೆ’ ಎಂದು ಹೇಳಿದರು.

ಜಗತ್ತಿಗೆ ಸುರಕ್ಷಿತ ಹಾಗೂ ಕೈಗೆಟುಕುವ ಡಿಜಿಟಲ್‌ ಪಾವತಿ ವ್ಯವಸ್ಥೆಯ ಅಗತ್ಯವಿದ್ದಾಗ ಭಾರತ ಯುಪಿಐ ಅಭಿವೃದ್ಧಿಪಡಿಸಿದ್ದು, ಅದನ್ನಿಂದು ಫ್ರಾನ್ಸ್‌, ಯುಎಇ, ಸಿಂಗಾಪುರದಂತಹ ದೇಶಗಳು ಬಳಸುತ್ತಿರುವುದು, ಕೊರೋನಾ ಸಮಯದಲ್ಲಿ ಲಸಿಕೆ ಒದಗಿಸಿದ್ದನ್ನು ಪ್ರಧಾನಿ ಸ್ಮರಿಸಿದರು.