ದಕ್ಷಿಣ ಭಾರತದಲ್ಲಿ ಶೇ.14ರಷ್ಟು ಅಧಿಕ ಮುಂಗಾರು ಮಳೆ

| Published : Jul 02 2024, 01:45 AM IST / Updated: Jul 02 2024, 06:06 AM IST

ದಕ್ಷಿಣ ಭಾರತದಲ್ಲಿ ಶೇ.14ರಷ್ಟು ಅಧಿಕ ಮುಂಗಾರು ಮಳೆ
Share this Article
  • FB
  • TW
  • Linkdin
  • Email

ಸಾರಾಂಶ

ನಿಗದಿತ ಮೇ 30ರಂದೇ ಕೇರಳದ ಕರಾವಳಿ ಮೂಲಕ ದೇಶವನ್ನು ಪ್ರವೇಶಿಸಿದ್ದ ಮುಂಗಾರು ಮಾರುತಗಳು, ಕಳೆದ ಒಂದು ತಿಂಗಳ ಅವಧಿಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿಸುವಲ್ಲಿ ವಿಫಲವಾಗಿದೆ.

ನವದೆಹಲಿ: ನಿಗದಿತ ಮೇ 30ರಂದೇ ಕೇರಳದ ಕರಾವಳಿ ಮೂಲಕ ದೇಶವನ್ನು ಪ್ರವೇಶಿಸಿದ್ದ ಮುಂಗಾರು ಮಾರುತಗಳು, ಕಳೆದ ಒಂದು ತಿಂಗಳ ಅವಧಿಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿಸುವಲ್ಲಿ ವಿಫಲವಾಗಿದೆ.

ಜೂನ್‌ ತಿಂಗಳಲ್ಲಿ ಸುರಿಯಬೇಕಿದ್ದ ನಿರೀಕ್ಷಿತ 165.3 ಮಿ.ಮೀ ಬದಲಾಗಿ 147.2 ಮಿ.ಮೀ ನಷ್ಟು ಮಾತ್ರವೇ ಮಳೆ ಸುರಿದಿದೆ. ಅಂದರೆ ಒಟ್ಟಾರೆ ಮಳೆ ಕೊರತೆ ಪ್ರಮಾಣ ಶೇ.11ರಷ್ಟಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಜೂನ್‌ ಮಾಹೆಯಲ್ಲಿ ಇಷ್ಟು ಕಡಿಮೆ ಮಳೆ ಆಗಿದ್ದು 5 ವರ್ಷದ ಗರಿಷ್ಠ.

ಆದರೆ ಇದ್ದಿದ್ದರಲ್ಲೇ ಖುಷಿಯ ಸಂಗತಿ ಎಂದರೆ ದಕ್ಷಿಣ ಭಾರತದಲ್ಲಿ ಮಾತ್ರ ಶೇ.14ರಷ್ಟು ಹೆಚ್ಚಿನ ಮಳೆ ಸುರಿದಿದೆ. ಉಳಿದೆಡೆ ಮಳೆ ಕೊರತೆ ಉಂಟಾಗಿದೆ. ಆದರೆ ಜುಲೈನಲ್ಲಿ ವಾಡಿಕೆಗಿಂತ ಹೆಚ್ಚು (ಶೇ.106ರಷ್ಟು) ಮಳೆ ಸುರಿವ ನಿರೀಕ್ಷೆ ಇದೆ ಎಂದು ಐಎಂಡಿ ಹೇಳಿದೆ.

ಭಾರತದಲ್ಲಿ ಮುಂಗಾರು ಅವಧಿಯಾದ ಜೂನ್‌- ಸೆಪ್ಟೆಂಬರ್‌ನ 4 ತಿಂಗಳಲ್ಲಿ ಒಟ್ಟಾರೆ 87 ಸೆ.ಮೀ.ನಷ್ಟು ಮಳೆ ಸುರಿಯುತ್ತದೆ. ಈ ಪೈಕಿ ಶೆ.15ರಷ್ಟುಪಾಲು ಜೂನ್ ತಿಂಗಳಿನಲ್ಲಿ ಸುರಿಯುತ್ತದೆ. ಆದರೆ ಜೂ.16ರಿಂದ 27ರ ಅವಧಿಯಲ್ಲಿ 16 ದಿನಗಳ ಕಾಲ ಸಾಮಾನ್ಯಕ್ಕಿಂತ ಕಡಿಮೆ ಮಳೆ ಸುರಿದಿದೆ. ಇದು ಒಟ್ಟಾರೆ ಶೇ.11ರಷ್ಟು ಮಳೆ ಕೊರತೆಗೆ ಕಾರಣವಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಜೂನ್‌ ಮಳೆ ಕೊರತೆ ಪ್ರಮಾಣ ಕಳೆದ 5 ವರ್ಷಗಳಲ್ಲೇ ಗರಿಷ್ಠ ಪ್ರಮಾಣ ಮತ್ತು 2001ರ ಬಳಿಕದ 7ನೇ ಕನಿಷ್ಠ ಪ್ರಮಾಣದ ಮಳೆ.ಮೇ 30ರಂದು ಕೇರಳ ಮತ್ತು ಈಶಾನ್ಯ ರಾಜ್ಯಗಳ ದೇಶ ಪ್ರವೇಶಿಸಿದ್ದ ಮುಂಗಾರು ಮಾರುತಗಳು ಮಹಾರಾಷ್ಟ್ರ ಪ್ರವೇಶ ಮಾಡುವವವರೆಗೂ ಸಾಮಾನ್ಯವಾಗಿತ್ತು. ಆದರೆ ನಂತರದಲ್ಲಿ ಪಶ್ಚಿಮ ಬಂಗಾಳ, ಒಡಿಶಾ, ಜಾರ್ಖಂಡ್‌, ಬಿಹಾರ, ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ಉತ್ತರಪ್ರದೇಶ ರಾಜ್ಯದಲ್ಲಿ ಸೂಕ್ತ ಮಳೆ ಸುರಿಸುವಲ್ಲಿ ವಿಫಲವಾಗಿದೆ. ಪರಿಣಾಮ ಈ ರಾಜ್ಯಗಳಲ್ಲಿ ಬಿತ್ತನೆ ಪ್ರಮಾಣ ಕೂಡಾ ಕುಂಠಿತಗೊಂಡಿದೆ.

ಎಲ್ಲೆಲ್ಲಿ ಎಷ್ಟು ಮಳೆ?:

ವಾಯುವ್ಯ ಭಾರತದಲ್ಲಿ ಶೇ.33, ಮಧ್ಯಭಾರತದಲ್ಲಿ ಶೇ.14, ಈಶಾನ್ಯ ಭಾರತದಲ್ಲಿ ಶೇ.13ರಷ್ಟು ಮಳೆ ಕೊರತೆಯಾಗಿದ್ದರೆ, ದಕ್ಷಿಣ ಭಾರತದಲ್ಲಿ ಮಾತ್ರವೇ ಶೇ.14ರಷ್ಟು ಮಳೆ ಸುರಿದಿದೆ.ಹವಾಮಾನ ಇಲಾಖೆ ಅನ್ವಯ ದೇಶದ ಶೇ.12ರಷ್ಟು ಉಪ ವಿಭಾಗೀಯ ಪ್ರದೇಶಗಳಲ್ಲಿ ಅಧಿಕದಿಂದ ಭಾರೀ ಅಧಿಕ, ಶೆ.38ರಷ್ಟು ಪ್ರದೇಶಗಳಲ್ಲಿ ಸಾಮಾನ್ಯ ಮಳೆಯಾಗಿದ್ದರೆ ಶೇ.50ರಷ್ಟು ಪ್ರದೇಶಗಳಲ್ಲಿ ಮಳೆ ಕೊರತೆಯಾಗಿದೆ.

ಆಶಾಭಾವನೆ:

ಭಾರತೀಯ ಹವಾಮಾನ ಇಲಾಖೆಯ ಈ ಹಿಂದಿನ ದಾಖಲೆಗಳನ್ನು ನೋಡುವುದಾದರೆ ಜೂನ್‌ನಲ್ಲಿ ಮಳೆಕೊರತೆ ದಾಖಲಾದ 25 ವರ್ಷಗಳ ಪೈಕಿ 20 ವರ್ಷ, ಜುಲೈ ತಿಂಗಳಲ್ಲಿ ಸಾಮಾನ್ಯ ಅಥವಾ ಸಾಮಾನ್ಯಕ್ಕಿಂತ ಅಧಿಕ ಮಳೆಯಾಗಿದೆ. ಇದು ಇದ್ದಿದ್ದರಲ್ಲಿ ಕೃಷಿಕರಿಗೆ ಸ್ವಲ್ಪ ಸಮಾಧಾನದ ಸಂಗತಿಯಾಗಿದೆ.