ಸಾರಾಂಶ
ನವದೆಹಲಿ: ವಿದೇಶಗಳಲ್ಲಿ ಉದ್ಯೋಗ ಸಿಗುವ ಭರವಸೆಯಿಂದ ತರೆಳಿ ಮ್ಯಾನ್ಮಾರ್‌ನಲ್ಲಿ ಸಿಲುಕಿಕೊಂಡಿದ್ದ 540 ಭಾರತೀಯರನ್ನು ಭಾರತ ಸರ್ಕಾರ ರಕ್ಷಿಸಿದೆ. ಈ ಪೈಕಿ 28 ಕನ್ನಡಿಗರು ಸೇರಿದಂತೆ 283 ಭಾರತೀಯರನ್ನು ರಕ್ಷಿಸಿ ಸೋಮವಾರ ಸ್ವದೇಶಕ್ಕೆ ಕರೆತರಲಾಗಿದೆ.ಚೀನಾ, ಥಾಯ್ಲೆಂಡ್ ಹಾಗೂ ಮ್ಯಾನ್ಮಾರ್‌ನ ವಂಚಕರು ಇವರಿಗೆ ಸೋಷಿಯಲ್ ಮೀಡಿಯಾ ಮೂಲಕ ಉದ್ಯೋಗದ ಭರವಸೆ ನೀಡಿ ಥಾಯ್ಲಂಡ್, ಮಲೇಷ್ಯಾ ಸೇರಿ ವಿವಿಧ ವಿದೇಶಗಳಿಗೆ ಕರೆಸಿಕೊಂಡಿದ್ದರು. ಬಳಿಕ ಉದ್ಯೋಗ ನೀಡದೆ ಮೋಸ ಮಾಡಿದ್ದರು ಹಾಗೂ ಅವರನ್ನು ಅಲ್ಲಿಂದ ಮ್ಯಾನ್ಮಾರ್‌ಗೆ ಕರೆದೊಯ್ದಿದ್ದರು. ಅಲ್ಲಿ ಪಾಸ್‌ಪೋರ್ಟ್ ಕಿತ್ತುಕೊಂಡು ದಿನಕ್ಕೆ 15 ಗಂಟೆ ಕೆಲಸ ಮಾಡಿಸುತ್ತಿದ್ದರು. ಅಕ್ರಮವಾಗಿ ದುಡ್ಡು ಸುಲಿಯುವ ಸೈಬರ್ ಅಪರಾಧದ ಕೂಪಕ್ಕೆ ತಳ್ಳಿದ್ದರು. ಈ ವಿಷಯ ವಿದೇಶಾಂಗ ಇಲಾಖೆ ಗಮನಕ್ಕೆ ಬಂದ ಬಳಿಕ ಅಂಥವರನ್ನು ಗುರುತಿಸಿ ಮ್ಯಾನ್ಮಾರ್, ಥೈಲ್ಯಾಂಡ್ ರಾಯಭಾರ ಕಚೇರಿಗಳ ಮೂಲಕ ವಾಪಸು ಕರೆಸಿಕೊಳ್ಳಲಾಗಿದೆ.ಸೋಮವಾರ ಐಎಎಫ್ ವಿಮಾನದಲ್ಲಿ ವಾಪಸು ಬಂದ ಮೊದಲ ತಂಡದಲ್ಲಿನ 283 ಭಾರತೀಯರ ಪೈಕಿ 28 ಮಂದಿ ಕನ್ನಡಿಗರಿದ್ದಾರೆ. ಕನ್ನಡಿಗರಲ್ಲಿ 4 ಮಹಿಳೆಯರೂ ಉಂಟು. 257 ಜನರ ಇನ್ನೊಂದು ತಂಡ ಬುಧವಾರ ನಸುಕಿನ ಜಾವ ಭಾರತಕ್ಕೆ ಮರಳುವ ನಿರೀಕ್ಷೆ ಇದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.