6 ತಿಂಗಳಲ್ಲಿ 2.26 ಲಕ್ಷ ಕೋಟಿ ಮೌಲ್ಯದ ಚಿನ್ನ ಆಮದು

| Published : Oct 31 2024, 12:58 AM IST

ಸಾರಾಂಶ

ದೇಶದಲ್ಲಿ ಚಿನ್ನದ ಬೆಲೆ ಗಗನಕ್ಕೇರಿದ್ದರೂ, ಚಿನ್ನದ ಖರೀದಿ ಮಾತ್ರ ನಿಂತಿಲ್ಲ. ಕಳೆದ ಏಪ್ರಿಲ್‌- ಸೆಪ್ಟೆಂಬರ್‌ ಅವಧಿಯಲ್ಲಿ ಭಾರತ 2.26 ಲಕ್ಷ ಕೋಟಿ ರು. ಮೌಲ್ಯದ ಚಿನ್ನವನ್ನು ವಿದೇಶಗಳಿಂದ ಆಮದು ಮಾಡಿಕೊಂಡಿದೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.21.78ರಷ್ಟು ಏರಿಕೆಯಾಗಿದೆ.

ನವದೆಹಲಿ: ದೇಶದಲ್ಲಿ ಚಿನ್ನದ ಬೆಲೆ ಗಗನಕ್ಕೇರಿದ್ದರೂ, ಚಿನ್ನದ ಖರೀದಿ ಮಾತ್ರ ನಿಂತಿಲ್ಲ. ಕಳೆದ ಏಪ್ರಿಲ್‌- ಸೆಪ್ಟೆಂಬರ್‌ ಅವಧಿಯಲ್ಲಿ ಭಾರತ 2.26 ಲಕ್ಷ ಕೋಟಿ ರು. ಮೌಲ್ಯದ ಚಿನ್ನವನ್ನು ವಿದೇಶಗಳಿಂದ ಆಮದು ಮಾಡಿಕೊಂಡಿದೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.21.78ರಷ್ಟು ಏರಿಕೆಯಾಗಿದೆ.

ಕಳೆದ ವರ್ಷದ ಏಪ್ರಿಲ್‌- ಸೆಪ್ಟೆಂಬರ್‌ ಅವಧಿಯಲ್ಲಿ ಭಾರತ 1.87 ಲಕ್ಷ ಕೋಟಿ ರು. ಮೌಲ್ಯದ ಚಿನ್ನದ ಆಮದು ಮಾಡಿಕೊಂಡಿತ್ತು. ಕಳೆದ ಏಪ್ರಿಲ್‌ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಚಿನ್ನದ ಮೇಲಿನ ಆಮದು ಸುಂಕ ಕಡಿಮೆ ಮಾಡಿತ್ತು. ಅದರ ಬೆನ್ನಲ್ಲೇ ದೇಶಕ್ಕೆ ದಾಖಲೆ 2.26 ಲಕ್ಷ ಕೋಟಿ ರು. ಮೌಲ್ಯದ ಚಿನ್ನ ಆಮದು ಮಾಡಿಕೊಳ್ಳಲಾಗಿದೆ.

2023-24ರ ಹಣಕಾಸು ವರ್ಷದಲ್ಲಿ ಭಾರತ ಒಟ್ಟಾರೆ 3.82 ಲಕ್ಷ ಕೋಟಿ ರು. ಮೌಲ್ಯದ ಚಿನ್ನ ಆಮದು ಮಾಡಿಕೊಂಡಿತ್ತು.

ಚೀನಾದ ನಂತರ ಭಾರತವು ವಿಶ್ವದ ಎರಡನೇ ಅತಿದೊಡ್ಡ ಚಿನ್ನದ ಗ್ರಾಹಕ ದೇಶವಾಗಿದೆ. ಭಾರತಕ್ಕೆ ಸ್ವಿಜರ್ಲೆಂಡ್‌ ಅತಿ ದೊಡ್ಡ ರಫ್ತುದಾರ ದೇಶವಾಗಿದ್ದು, ಭಾರತಕ್ಕೆ ಅಮದಾಗುವ ಚಿನ್ನಗಳ ಪೈಕಿ ಶೇ.40ರಷ್ಟು ಪಾಲನ್ನು ಹೊಂದಿದೆ. ನಂತರ ಯುಎಇ(ಶೇ.16), ದಕ್ಷಿಣ ಆಫ್ರಿಕಾ(ಶೇ.10)ರಷ್ಟು ಚಿನ್ನಗಳನ್ನು ಭಾರತಕ್ಕೆ ರಫ್ತು ಮಾಡುತ್ತವೆ.