ಯುದ್ಧ ನಿಲ್ಲಿಸಿ: ರಷ್ಯಾಗೆ ಭಾರತ-ಆಸ್ಟ್ರಿಯಾ ಜಂಟಿ ಮನವಿ

| Published : Jul 11 2024, 01:33 AM IST / Updated: Jul 11 2024, 05:05 AM IST

ಸಾರಾಂಶ

ರಷ್ಯಾ ಭೇಟಿ ಬಳಿಕ ಆಸ್ಟ್ರಿಯಾಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ರಷ್ಯಾ-ಉಕ್ರೇನ್‌ ಯುದ್ಧದ ವಿರುದ್ಧ ದನಿ ಎತ್ತಿದ್ದಾರೆ.

 ವಿಯೆನ್ನಾ :  ರಷ್ಯಾ ಭೇಟಿ ಬಳಿಕ ಆಸ್ಟ್ರಿಯಾಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ರಷ್ಯಾ-ಉಕ್ರೇನ್‌ ಯುದ್ಧದ ವಿರುದ್ಧ ದನಿ ಎತ್ತಿದ್ದಾರೆ. ಆಸ್ಟ್ರಿಯಾ ಪ್ರಧಾನಿ ಕಾರ್ಲ್‌ ನೇಹ್ಯಾಮರ್‌ ಅವರ ಜತೆಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೋದಿ, ‘ಇದು ಯುದ್ಧದ ಸಮಯವಲ್ಲ’ ಎಂದು ಹೇಳಿದ್ದಾರೆ.

ಅವರ ಹೇಳಿಕೆಗೆ ದನಿಗೂಡಿಸಿದ ನೇಹ್ಯಾಮರ್‌, ‘ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸುವ ಯತ್ನದಲ್ಲಿ ಭಾರತದ ಪಾತ್ರ ಮಹತ್ವದ್ದಾಗಿದೆ. ಎರಡೂ ದೇಶಗಳಿಗೆ ಆಸ್ಟ್ರಿಯಾದಲ್ಲಿ ಮಾತುಕತೆಯ ವೇದಿಕೆ ಅಣಿ ಮಾಡಿಕೊಡಲು ನಾವು ಸಿದ್ಧ’ ಎಂದು ಹೇಳಿದ್ದಾರೆ.

ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೇಹ್ಯಾಮರ್, ‘ಉಕ್ರೇನ್‌ನಲ್ಲಿನ ಸಂಘರ್ಷದ ಕುರಿತು ಮೋದಿ ಅವರೊಂದಿಗೆ ಚರ್ಚಿಸಿದ್ದೇನೆ. ಯುದ್ಧ ತಣಿಸುವಲ್ಲಿ ಇದರಲ್ಲಿ ಭಾರತದ ಪಾತ್ರ ಮಹತ್ವದ್ದಾಗಿದೆ. ಇದಲ್ಲದೆ ಇದಲ್ಲದೆ, ಮಧ್ಯಪ್ರಾಚ್ಯದಲ್ಲಿನ ಸಂಘರ್ಷದ ಬಗ್ಗೆಯೂ ನಾವು ಚರ್ಚಿಸಿದೆವು’ ಎಂದರು.

ಬಳಿಕ ಮಾತನಾಡಿದ ಮೋದಿ, ‘ನೇಹ್ಯಾಮರ್‌ ಮತ್ತು ನಾನು ಪ್ರಪಂಚದಾದ್ಯಂತ ನಡೆಯುತ್ತಿರುವ ಸಂಘರ್ಷಗಳ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದೇವೆ, ಅದು ಉಕ್ರೇನ್‌ನಲ್ಲಿನ ಸಂಘರ್ಷ ಅಥವಾ ಪಶ್ಚಿಮ ಏಷ್ಯಾದ ಪರಿಸ್ಥಿತಿಯಾಗಿರಬಹುದು. ಇದು ಯುದ್ಧದ ಸಮಯವಲ್ಲ ಎಂದು ನಾನು ಮೊದಲೇ ಹೇಳಿದ್ದೇನೆ’ ಎಂದರು.‘

‘ಯುದ್ಧಭೂಮಿಯಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ’ ಎಂದು ಪ್ರತಿಪಾದಿಸಿದ ಮೋದಿ, ಭಾರತ ಮತ್ತು ಆಸ್ಟ್ರಿಯಾ ಮಾತುಕತೆ ಮತ್ತು ರಾಜತಾಂತ್ರಿಕತೆಗೆ ಒತ್ತು ನೀಡುತ್ತವೆ ಮತ್ತು ಅದಕ್ಕಾಗಿ ಅಗತ್ಯವಿರುವ ಯಾವುದೇ ಬೆಂಬಲವನ್ನು ನೀಡಲು ಸಿದ್ಧ’ ಎಂದು ಹೇಳಿದರು.

‘ಭಾರತ ಮತ್ತು ಆಸ್ಟ್ರಿಯಾ ಎರಡೂ ಭಯೋತ್ಪಾದನೆಯನ್ನು ಬಲವಾಗಿ ಖಂಡಿಸುತ್ತವೆ ಮತ್ತು ಅದು ಯಾವುದೇ ರೂಪದಲ್ಲಿ ಸ್ವೀಕಾರಾರ್ಹವಲ್ಲ ಎಂಬ ನಿಲುವು ಹೊಂದಿವೆ. ಉಗ್ರವಾದವನ್ನು ಯಾವುದೇ ರೀತಿಯಲ್ಲೂ ಸಮರ್ಥಿಸಲು ಸಾಧ್ಯವಿಲ್ಲ’ ಎಂದರು.