ಯೋಧರ ಜತೆ ಮೋದಿ ದೀಪಾವಳಿ

| Published : Nov 13 2023, 01:15 AM IST / Updated: Nov 13 2023, 01:16 AM IST

ಸಾರಾಂಶ

ಚೀನಾ ಗಡಿಯ ಲೆಪ್ಚಾದಲ್ಲಿ ಯೋಧರ ಜತೆ ಸಂಭ್ರಮಿಸಿದ ಪ್ರಧಾನಿ. ಐಟಿಬಿಪಿ ಧಿರಿಸಿನಲ್ಲಿ ಮಿಂಚಿದ ನಮೋ. ಯೋಧರಿಗೆ ಸಿಹಿ ವಿತರಣೆ. ಗಡಿಯಲ್ಲಿ ಯೋಧರಿರುವವರೆಗೆ ಭಾರತ ಅತ್ಯಂತ ಸುರಕ್ಷಿತ. ಯೋಧರಿರುವ ಸ್ಥಳವು ದೇವಾಲಯಕ್ಕಿಂತ ಕಡಿಮೆ ಏನಲ್ಲ. ಯೋಧರು ಎಲ್ಲಿರುತ್ತಾರೋ ಅಲ್ಲಿಯೇ ನನ್ನ ದೀಪಾವಳಿ. ದೇಶದ ಪ್ರತಿ ವ್ಯಕ್ತಿ ಯೋಧರ ಹೆಸರಲ್ಲಿ ಒಂದೊಂದು ದೀಪ ಹಚ್ಚಿ: ಪಿಎಂ

ಪಿಟಿಐ ಲೆಪ್ಚಾ(ಹಿಮಾಚಲಪ್ರದೇಶ)ಪ್ರಧಾನಿ ನರೇಂದ್ರ ಮೋದಿ ಅವರು ಈ ವರ್ಷವೂ ಯೋಧರ ಜತೆ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮಾಚರಣೆಯಲ್ಲಿ ತೊಡಗಿದರು. ಹಿಮಾಚಲಪ್ರದೇಶದ, ಚೀನಾ ಗಡಿಯಲ್ಲಿರುವ ಲೆಪ್ಚಾದಲ್ಲಿ ಇಂಡೋ-ಟಿಬೆಟ್‌ ಗಡಿ ಪೊಲೀಸ್‌ (ಐಟಿಬಿಪಿ) ಸಿಬ್ಬಂದಿ ಜತೆಗೆ ಮೋದಿ ಅವರು ಭಾನುವಾರ ಹಬ್ಬ ಆಚರಿಸಿದರು.ಐಟಿಬಿಪಿ ಧಿರಿಸಿನಲ್ಲಿ ಮಿಂಚಿದ ಮೋದಿ ಅವರು, ಯೋಧರ ಜತೆ ಮಾತುಕತೆ ನಡೆಸಿದರು. ಬಳಿಕ ಸಿಹಿ ಹಂಚಿದರು. ಇದೇ ವೇಳೆ ಯೋಧರನ್ನುದ್ದೇಶಿಸಿ ಭಾಷಣ ಮಾಡಿದರು.2014ರಲ್ಲಿ ಪ್ರಧಾನಿಯಾದಾಗಿನಿಂದ ಮೋದಿ ಅವರು ದೀಪಾವಳಿಯನ್ನು ಯೋಧರ ಜತೆ ಆಚರಿಸುತ್ತಾ ಬಂದಿದ್ದಾರೆ. ಕಳೆದ ವರ್ಷ ಅವರು ಕಾರ್ಗಿಲ್‌ನಲ್ಲಿ ಹಬ್ಬ ಮಾಡಿದ್ದರು.ಭಾರತ ಅತ್ಯಂತ ಸುರಕ್ಷಿತ:ದೀಪಾವಳಿ ಆಚರಣೆ ಬಳಿಕ ಯೋಧರನ್ನು ಉದ್ದೇಶಿಸಿ ಮೋದಿ ಮಾತನಾಡಿದರು. ರಕ್ಷಣಾ ವಲಯದಲ್ಲಿ ಭಾರತ ಅತಿದೊಡ್ಡ ಜಾಗತಿಕ ಶಕ್ತಿಯಾಗಿ ಪ್ರವರ್ಧಮಾನಕ್ಕೆ ಬರುತ್ತಿದೆ. ಭದ್ರತಾ ಪಡೆಗಳ ಸಾಮರ್ಥ್ಯ ನಿರಂತರವಾಗಿ ಹೆಚ್ಚಾಗುತ್ತಲೇ ಇದೆ. ಹಾಗೆಯೇ ವಿಶ್ವಮಟ್ಟದಲ್ಲೂ ಭಾರತದ ಮೇಲೆ ನಿರೀಕ್ಷೆ ಹೆಚ್ಚಾಗಿದೆ ಎಂದು ಹೇಳಿದರು.

ಯೋಧರಿರುವ ಸ್ಥಳವು ದೇವಾಲಯಕ್ಕಿಂತ ಕಡಿಮೆ ಏನಲ್ಲ. ನಮ್ಮ ಕೆಚ್ಚೆದೆಯ ವೀರರು ಹಿಮಾಲಯದಂತಹ ಗಡಿಗಳಲ್ಲಿ ಎಲ್ಲಿವರೆಗೂ ಕಾವಲಿಗೆ ನಿಂತಿರುತ್ತಾರೋ ಅಲ್ಲಿವರೆಗೂ ಭಾರತ ಸುರಕ್ಷಿತವಾಗಿರುತ್ತದೆ. ಗಡಿಗಳ ರಕ್ಷಣೆಯಾದರೆ, ದೇಶದಲ್ಲಿ ಶಾಂತಿಯ ವಾತಾವರಣವಿರುತ್ತದೆ. ಇದರಲ್ಲಿ ಯೋಧರದ್ದು ದೊಡ್ಡ ಪಾತ್ರ. ದೇಶದ ಪ್ರತಿ ವ್ಯಕ್ತಿ ಯೋಧರ ಹೆಸರಲ್ಲಿ ಒಂದೊಂದು ದೀಪ ಹಚ್ಚಬೇಕು ಎಂದು ಕರೆ ನೀಡಿದರು.ಸ್ವಾತಂತ್ರ್ಯಾನಂತರ ನಮ್ಮ ವೀರ ಯೋಧರು ಹಲವು ಯುದ್ಧಗಳಲ್ಲಿ ಭಾಗಿಯಾಗುವ ಮೂಲಕ ದೇಶದ ಹೃದಯ ಗೆದ್ದಿದ್ದಾರೆ. ಸವಾಲುಗಳ ನಡುವೆಯೂ ವಿಜಯವನ್ನು ಕಸಿದಿದ್ದಾರೆ. ಪರಿವಾರ ಇದ್ದ ಕಡೆ ಪರ್ವ ಇರುತ್ತದೆ. ಆದರೆ ಹಬ್ಬದ ದಿನಗಳಂದು ಕುಟುಂಬದಿಂದ ದೂರ ಇದ್ದು, ಗಡಿಯಲ್ಲಿ ನಿಂತು ಹೋರಾಡುವುದು ಯೋಧರ ಬದ್ಧತೆಯನ್ನು ಎತ್ತಿತೋರಿಸುತ್ತದೆ. ಇದಕ್ಕೆ ದೇಶ ನಿಮಗೆ ಆಭಾರಿಯಾಗಿರುತ್ತದೆ ಎಂದು ಹೇಳಿದರು.ಕಳೆದ 30ರಿಂದ 35 ವರ್ಷಗಳಿಂದ ಯೋಧರನ್ನು ಬಿಟ್ಟು ನಾನು ಎಂದಿಗೂ ದೀಪಾವಳಿ ಆಚರಿಸಿಕೊಂಡಿಲ್ಲ. ಪ್ರಧಾನಿ ಅಥವಾ ಸಿಎಂ ಆಗಿರದ ದಿನಗಳಲ್ಲೂ ನಾನು ಗಡಿಯಲ್ಲಿ ನಿಮ್ಮ ಜತೆ ದೀಪಾವಳಿ ಆಚರಿಸಿದ್ದೇನೆ. ನೀವೆಲ್ಲಿದ್ದೀರೋ ಅಲ್ಲಿಯೇ ನನ್ನ ದೀಪಾವಳಿ ಎಂದು ಹೇಳಿದರು.--ಗಡಿಯಲ್ಲಿ ಮೋದಿ 10ನೇ ದೀಪಾವಳಿ2014: ಸಿಯಾಚಿನ್‌ ಹಿಮಪರ್ವತ2015: ಪಂಜಾಬ್‌ ಗಡಿ2016: ಹಿಮಾಚಲದ ಸುಮ್ಡೋ ಗಡಿ2017: ಉತ್ತರ ಕಾಶ್ಮೀರದ ಗುರೇಜ್‌2018: ಉತ್ತರಾಖಂಡದ ಹಾರ್ಸಿಲ್‌2019: ಜಮ್ಮು-ಕಾಶ್ಮೀರದ ರಜೌರಿ2020: ರಾಜಸ್ಥಾನದ ಲಾಂಗೆವಾಲಾ2021: ಕಾಶ್ಮೀರದ ನೌಶೇರಾ2022: ಕಾರ್ಗಿಲ್‌2023: ಹಿಮಾಚಲದ ಲೆಪ್ಚಾ