ಸಾರಾಂಶ
ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನದ ಬಣ್ಣವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಟ್ಟಿ ಧ್ವನಿಯಲ್ಲಿ ಬಯಲು ಮಾಡಲು ಭಾರತ ಮುಂದಾಗಿದೆ.
ನವದೆಹಲಿ: ನೀರು, ವ್ಯಾಪಾರ ಸ್ಥಗಿತಗೊಳಿಸಿದ್ದಾಯ್ತು, ವಾಯು ಮಾರ್ಗ ಬಂದ್ ಮಾಡಿದ್ದಾಯ್ತು, ಇದೀಗ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನದ ಬಣ್ಣವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಟ್ಟಿ ಧ್ವನಿಯಲ್ಲಿ ಬಯಲು ಮಾಡಲು ಭಾರತ ಮುಂದಾಗಿದೆ.
ಪಹಲ್ಗಾಂ ದಾಳಿ ಬಳಿಕ ಪಾಕಿಸ್ತಾನಕ್ಕೆ ರಾಜತಾಂತ್ರಿಕ ಮಾರ್ಗದಲ್ಲಿ ಏಟು ನೀಡುತ್ತಿರುವ ಭಾರತ ಈಗ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (ಯುಎನ್‌ಎಸ್‌ಸಿ) ಗಡಿಯಾಚೆಗಿನ ಭಯೋತ್ಪಾದನೆ ಕುರಿತು ಚರ್ಚೆಯ ಪ್ರಸ್ತಾಪ ಇಟ್ಟಿದೆ. ಪಾಕಿಸ್ತಾನವನ್ನು ಕೇಂದ್ರೀಕರಿಸಿ ಭಾರತ ಇಂಥದ್ದೊಂದು ಪ್ರಸ್ತಾಪವನ್ನು ಯುಎನ್‌ಎಸ್‌ಸಿ ಮುಂದಿಟ್ಟಿದೆ.
ಚೀನಾ ಮತ್ತು ಪಾಕಿಸ್ತಾನವನ್ನು ಹೊರತುಪಡಿಸಿ ಯುಎನ್‌ಎಸ್‌ಸಿಯ 15 ಸದಸ್ಯ ದೇಶಗಳಲ್ಲಿ (5 ಶಾಶ್ವತ ಹಾಗೂ 10 ತಾತ್ಕಾಲಿಕ ಸದಸ್ಯ ದೇಶಗಳು) 13 ದೇಶಗಳ ಬೆಂಬಲವನ್ನು ಭಾರತ ಗಳಿಸಿದೆ. ಒಂದು ವೇಳೆ ಯುಎನ್‌ಎಸ್‌ಸಿಯಲ್ಲಿ ಈ ಚರ್ಚೆ ನಡೆದರೆ, ಪಹಲ್ಗಾಂನಂಥ ಗಡಿಯಾಚೆಗಿನ ಭಯೋತ್ಪಾದನಾ ದಾಳಿ ಹೇಗೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಡೆಯುತ್ತಿದೆ ಎಂಬುದನ್ನು ಭಾರತ ಬಯಲು ಮಾಡಲು ವೇದಿಕೆ ಸಿಗಲಿದೆ.
ಪಾಕ್ ಬೆಂಬಲಿತ ಲಷ್ಕರ್-ಎ-ತೊಯ್ಬಾ ಮತ್ತು ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಗಳ ವಿರುದ್ಧ ಭಾರತವು ಮೊದಲಿನಿಂದಲೂ ಅಂತಾರಾಷ್ಟ್ರೀಯಮಟ್ಟದಲ್ಲಿ ಧ್ವನಿ ಎತ್ತುತ್ತಲೇ ಬಂದಿದೆ. ಇಂಥ ದಾಳಿಗಳನ್ನು ಅಂತಾರಾಷ್ಟ್ರೀಯ ಭಯೋತ್ಪಾದನಾ ಬೆದರಿಕೆಯನ್ನಾಗಿ ಪರಿಗಣಿಸಬೇಕೆಂದು ಭಾರತ ಒತ್ತಾಯಿಸಲಿದೆ.