ಸಾರಾಂಶ
ನವದಹಲಿ: ಇತ್ತೀಚೆಗಷ್ಟೇ 5 ರಾಷ್ಟ್ರಗಳ ಪ್ರವಾಸ ಮುಗಿಸಿ ಬಂದ ಬೆನ್ನಲ್ಲೇ ಪ್ರಧಾನಿ ಮೋದಿ ಜು.23ರಿಂದ 4 ದಿನಗಳ ಕಾಲ ಬ್ರಿಟನ್ ಮತ್ತು ಮಾಲ್ಡೀವ್ಸ್‌ಗೆ ಭೇಟಿ ನೀಡಲಿದ್ದಾರೆ.
ಜು.23 ಮತ್ತು 24ರಂದು ಬ್ರಿಟನ್‌ಗೆ ತೆರಳಲಿದ್ದು, ಅಲ್ಲಿ ಉಭಯ ರಾಷ್ಟ್ರಗಳ ನಡುವಿನ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆಯಿದೆ. ಅಲ್ಲದೆ, ಭಾರತ ವಿರೋಧಿ ಖಲಿಸ್ತಾನಿ ಉಗ್ರ ಚಟುವಟಿಕೆಗಳ ನಿಗ್ರಹ ಕುರಿತಾಗಿಯೂ ಚರ್ಚಿಸುವ ನಿರೀಕ್ಷೆಯಿದೆ. ಪ್ರಧಾನಿ ಕೀರ್ ಸ್ಟಾರ್ಮರ್ ಹಾಗೂ ದೊರೆ ಕಿಂಗ್ ಚಾರ್ಲ್ಸ್ 3 ಜೊತೆ ಮೋದಿ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.
ಮೋದಿ ಬ್ರಿಟನ್ ಬಳಿಕ 25, 26ರಂದು ಮಾಲ್ಡೀವ್ಸ್‌ಗೆ ತೆರಳಲಿದ್ದು, ಮಾಲ್ಡೀವ್ಸ್ ಸ್ವಾತಂತ್ರ್ಯ ದಿನಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಆ ಬಳಿಕ ಅಧ್ಯಕ್ಷ ಮೊಹಮ್ಮದ್ ಮುಯಿಜು ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಪಾಕಿಸ್ತಾನವು ಚೀನಾ ಮತ್ತು ಬಾಂಗ್ಲಾದೇಶದೊಡನೆ ಸೇರಿಕೊಂಡು ಸಾರ್ಕ್ ಒಕ್ಕೂಟಕ್ಕೆ ಬದಲಿ ಒಕ್ಕೂಟ ರಚಿಸುವ ಷಡ್ಯಂತ್ರ ನಡೆಸುತ್ತಿರುವ ಹೊತ್ತಿನಲ್ಲೇ ಮೋದಿ ಭೇಟಿ ಕುತೂಹಲ ಮೂಡಿಸಿದೆ.
ಬಾಂಗ್ಲಾ ವಿಮಾನ ಪತನ: ಸಾವಿನ ಸಂಖ್ಯೆ 31ಕ್ಕೇರಿಕೆ: ವಿದ್ಯಾರ್ಥಿಗಳ ಪ್ರತಿಭಟನೆ
ಢಾಕಾ: ಇಲ್ಲಿನ ಕಾಲೇಜಿನ ಮೇಲೆ ಸೋಮವಾರ ಯುದ್ಧ ವಿಮಾನ ಪತನಗೊಂಡ ಘಟನೆಯಲ್ಲಿ ಗಾಯಗೊಂಡಿದ್ದ ಇನ್ನೂ 10 ಜನರು ಮಂಗಳವಾರ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಘಟನೆಗೆ ಬಲಿಯಾದವರ ಸಂಖ್ಯೆ 31ಕ್ಕೆ ತಲುಪಿದೆ. ಅಪಘಾತದಲ್ಲಿ 170ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಈ ಪೈಕಿ ಹಲವರ ಸ್ಥಿತಿ ಇನ್ನೂ ಗಂಭೀರವಾಗಿದೆ. ಈ ನಡುವೆ ವಿಮಾನ ಪತನಕ್ಕೆ ಕಾರಣವೇನು ಎಂಬುದರ ಬಗ್ಗೆ ಸರ್ಕಾರ ನಿಖರ ಮಾಹಿತಿ ನೀಡಬೇಕು ಎಂದು ಆಗ್ರಹಿಸಿ ಸಾವಿರಾರು ವಿದ್ಯಾರ್ಥಿಗಳು ರಾಜಧಾನಿ ಢಾಕಾದಲ್ಲಿ ಪ್ರತಿಭಟನೆ ನಡೆಸಿದರು. ಚೀನಾ ನಿರ್ಮಿತ ವಿಮಾನ ಸೋಮವಾರ ಉಡ್ಡಯನಗೊಂಡ ಕೆಲ ಹೊತ್ತಿನಲ್ಲೇ ಪತನಗೊಂಡಿತ್ತು.
ಮುಂಬೈ ರೈಲು ಸ್ಫೋಟ ಆರೋಪಿಗಳ ಖುಲಾಸೆ ಪ್ರಶ್ನಿಸಿ ಸುಪ್ರೀಂಗೆ ಅರ್ಜಿ
ನವದೆಹಲಿ: 189 ಜನರ ಬಲಿಪಡೆದ 2006ರ ಮುಂಬೈ ಸರಣಿ ರೈಲು ಸ್ಫೋಟ ಪ್ರಕರಣದ ಎಲ್ಲಾ 12 ಆರೋಪಿಗಳನ್ನು ಸಾಕ್ಷ್ಯಧಾರಗಳ ಕೊರತೆ ನೀಡಿ ಬಾಂಬೆ ಹೈಕೋರ್ಟ್ ಖುಲಾಸೆಗೊಳಿಸಿದ್ದನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಈ ಅರ್ಜಿ ಕುರಿತು ಸುಪ್ರೀಂಕೋರ್ಟ್ ಜು.24ಕ್ಕೆ ವಿಚಾರಣೆ ನಡೆಯಲಿದೆ. ಮಹಾರಾಷ್ಟ್ರ ಸರ್ಕಾರದ ಪರವಾಗಿ, ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ಅರ್ಜಿ ಸಲ್ಲಿಸಿ ತುರ್ತು ವಿಚಾರಣೆಗೆ ಕೋರಿದ್ದರು. ಇದಕ್ಕೆ ಒಪ್ಪಿಗೆ ನೀಡಿದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರನ್ನೊಳಗೊಂಡ ಪೀಠ ಜು.24ರಂದು ಅರ್ಜಿ ವಿಚಾರಣೆಗೆ ದಿನಾಂಕ ನಿಗದಿ ಮಾಡಿದೆ.
ಎಐಎಡಿಎಂಕೆ ಗೆದ್ದರೆ ನವ ಜೋಡಿಗೆ ರೇಷ್ಮೆ ಸೀರೆ, ಮಾಂಗಲ್ಯಕ್ಕೆ ಚಿನ್ನ: ಪಳನಿ
ಕುಂಭಕೋಣಂ: ದೇಶಾದ್ಯಂತ ಭರಪೂರ ಉಚಿತ ಕೊಡುಗೆಗಳನ್ನು ರಾಜಕೀಯ ಪಕ್ಷಗಳು ಘೋಷಿಸುತ್ತಿದ್ದು, ತಮಿಳುನಾಡಿನ ವಿಪಕ್ಷ ಎಐಎಡಿಎಂಕೆ ಇನ್ನು ಒಂದು ಹೆಜ್ಜೆ ಮುಂದಕ್ಕೆ ಹೋಗಿ ನವ ವಿವಾಹಿತರಿಗೆ ಉಚಿತ ರೇಷ್ಮೆ ಸೀರೆ ಮತ್ತು ಮಾಂಗಲ್ಯ ಸರ ಮಾಡಿಸಿಕೊಳ್ಳಲು ಚಿನ್ನ ಕೊಡುವುದಾಗಿ ಭರವಸೆ ನೀಡಿದೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಎಐಎಡಿಎಂಕೆ ನಾಯಕ ಎಡಪ್ಪಾಡಿ ಪಳನೀಸ್ವಾಮಿ,‘ನಾವು ರೇಷ್ಮೆ ಕೈಮಗ್ಗಗಳ ಉದ್ಧಾರಕ್ಕೆ ಯಾವುದೇ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧ. ಮಾಜಿ ಸಿಎಂ ಜಯಲಲಿತ ಜಾರಿಗೆ ತಂದಿದ್ದ ಮದುವೆ ಸಹಾಯ ಯೋಜನೆ ಅಡಿಯಲ್ಲಿ ನವ ವಿವಾಹಿತರಿಗೆ ಉಚಿತ ರೇಷ್ಮೆ ಸೀರೆ, ಮಾಂಗಲ್ಯಕ್ಕೆ ಚಿನ್ನ ಕೊಡಲಿದ್ದೇವೆ’ ಎಂದು ಘೋಷಿಸಿದರು.
ಪಕ್ಷದ ಧ್ವಜಗಳಲ್ಲಿ ತ್ರಿವರ್ಣ ತೆಗೆವಂತೆ ಸಲ್ಲಿಸಿದ್ದ ಅರ್ಜಿ ಸುಪ್ರೀಂನಲ್ಲಿ ತಿರಸ್ಕಾರ
ನವದೆಹಲಿ: ರಾಷ್ಟ್ರಧ್ವಜದಲ್ಲಿರುವ ತ್ರಿವರ್ಣವನ್ನು ರಾಜಕೀಯ ಪಕ್ಷಗಳು ತಮ್ಮ ಧ್ವಜಗಳಲ್ಲಿ ಬಳಕೆ ಮಾಡುವುದನ್ನು ವಿರೋಧಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಿರಸ್ಕರಿಸಿದೆ. ಕಾಂಗ್ರೆಸ್, ಎನ್‌ಸಿಪಿ (ಎಸ್‌ಪಿ), ಎನ್‌ಸಿಪಿ ಪಕ್ಷಗಳು ತ್ರಿವರ್ಣವನ್ನು ತಮ್ಮ ಧ್ವಜದಲ್ಲಿ ಬಳಕೆ ಮಾಡಿವೆ. ಇದು ರಾಷ್ಟ್ರಧ್ವಜಕ್ಕೆ ಮಾಡಿದ ಅವಮಾನ. ಧ್ವಜದಿಂದ ಇವುಗಳನ್ನು ತೆಗೆಸಬೇಕು ಎಂದು ಸಂಜಯ್ ಭೀಮಶಂಕರ್ ತೋಬ್ಡೆ ಎಂಬುವವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪರಿಶೀಲಿಸಿದ ಸಿಜೆಐ ಬಿ.ಆರ್. ಗವಾಯಿ ಅವರ ನೇತೃತ್ವದ ತ್ರಿಸದಸ್ಯ ಪೀಠ, ‘ಕೆಲ ಪಕ್ಷಗಳು ಸ್ವಾತಂತ್ರ್ಯಪೂರ್ವದಿಂದಲೂ ಇದನ್ನು ಬಳಸುತ್ತಿವೆ’ ಎಂದು ಅರ್ಜಿಯನ್ನು ತಿರಸ್ಕರಿಸಿತು.