ಸಾರಾಂಶ
ನವದೆಹಲಿ: ರಷ್ಯಾದಿಂದ ಕಚ್ಚಾ ತೈಲ ಆಮದಿನ ಮೇಲೆ ಸದಾ ಕಾಲ ಕಿಡಿಕಾರುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಐರೋಪ್ಯ ದೇಶಗಳಿಗೆ ಭಾರತ ಸರ್ಕಾರ ಸೋಮವಾರ ತೀಕ್ಷ್ಣ ತಿರುಗೇಟು ನೀಡಿದೆ. ರಷ್ಯಾದ ಜೊತೆಗೆ ಭಾರತದ ವ್ಯವಹಾರಕ್ಕಿಂತ ಐರೋಪ್ಯ ರಾಷ್ಟ್ರಗಳ ವ್ಯಾಪಾರ ಜಾಸ್ತಿಯಿದೆ. ಅಲ್ಲದೇ ಭಾರತದ ಮೇಲೆ ಪ್ರಹಾರ ಬೀಸುವ ಅಮೆರಿಕವು ರಷ್ಯಾದಿಂದ ಪರಮಾಣು ಶಕ್ತಿಗೆ ಬೇಕಾದ ರಾಸಾಯನಿಕ, ರಸಗೊಬ್ಬರಗಳನ್ನು ಆಮದು ಮಾಡಿಕೊಳ್ಳುತ್ತಿದೆ ಎಂದು ತಿವಿದಿದೆ.ಭಾರತ ಸರ್ಕಾರದ ಪ್ರಹಾರಗಳು:
1. ಭಾರತ ಸರ್ಕಾರವು ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುತ್ತಿರುವುದಕ್ಕೆ ಅಮೆರಿಕ ಮತ್ತು ಪಶ್ಚಿಮಾತ್ಯ ದೇಶಗಳ ಕೆಂಗಣ್ಣಿಗೆ ಗುರಿಯಾಗಿದೆ. ಆದರೆ ಉಕ್ರೇನ್ ಜತೆ ಕದನ ಆರಂಭವಾದ ಬಳಿಕ ಭಾರತದ ಸಾಂಪ್ರದಾಯಿಕ ಇಂಧನದ ಪೂರೈಕೆಯು ಐರೋಪ್ಯ ದೇಶಗಳಿಗೆ ಹೋದ ಹಿನ್ನೆಲೆಯಲ್ಲಿ, ಭಾರತವು ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುತ್ತಿದೆ.
2. ಉಕ್ರೇನ್ ಜತೆ ಕದನ ಆರಂಭವಾದಾಗ ಭಾರತವು ರಷ್ಯಾ ಇಂಧನವನ್ನು ಸಂಸ್ಕರಿಸಿ ಐರೋಪ್ಯ ಒಕ್ಕೂಟಕ್ಕೆ ಪೂರೈಸುತ್ತಿದ್ದಾಗ. ಅದನ್ನು ಅಮೆರಿಕವೇ ಪ್ರೋತ್ಸಾಹಿಸಿತ್ತು.
3. ಭಾರತದ ಆಮದುಗಳು ಭಾರತೀಯ ಗ್ರಾಹಕರಿಗೆ ಕೈಗೆಟುಕುವ ಇಂಧನ ವೆಚ್ಚವನ್ನು ಖಚಿತಪಡಿಸಿಕೊಳ್ಳುವ ಉದ್ದೇಶವನ್ನು ಹೊಂದಿವೆ. ಜಾಗತಿಕ ಪರಿಸ್ಥಿತಿಯಿಂದ ಈ ನೀತಿಗೆ ಬರಬೇಕಾಗಿದೆ. ಆದಾಗ್ಯೂ, ಭಾರತವನ್ನು ಟೀಕಿಸುವ ರಾಷ್ಟ್ರಗಳೇ ರಷ್ಯಾದೊಂದಿಗೆ ವ್ಯಾಪಾರದಲ್ಲಿ ತೊಡಗಿಕೊಂಡಿವೆ. ನಮ್ಮ ಪರಿಸ್ಥಿತಿಯಂತೆ ಅವರಿಗೆ ಕಡ್ಡಾಯವಲ್ಲದಿದ್ದರೂ, ಆ ದೇಶಗಳು ರಷ್ಯಾ ಜತೆ ವ್ಯಾಪಾರ ನಡೆಸುತ್ತಿವೆ.
4. ಭಾರತದ ಮೇಲೆ ಕೆಂಡಕಾರುವ ಐರೋಪ್ಯ ಒಕ್ಕೂಟ 2024ರಲ್ಲಿ 67.5 ಯೂರೋ (7.35 ಲಕ್ಷ ಕೋಟಿ ರು.) ಮೌಲ್ಯದ ದ್ವಿಪಕ್ಷೀಯ ಸರಕು ವ್ಯಾಪಾರ ನಡೆಸಿದೆ. ಜೊತೆಗೆ 2023ರಲ್ಲಿ 17.2 ಯೂರೋ (1.87 ಲಕ್ಷ ಕೋಟಿ ರು.) ಮೌಲ್ಯದ ಸೇವೆಯನ್ನು ವಿನಿಮಯಗೊಳಿಸಿಕೊಂಡಿವೆ. ಇದು ಭಾರತದ ಒಟ್ಟು ವ್ಯಾಪಾರಕ್ಕಿಂತ ಹೆಚ್ಚು. 2022ರಲ್ಲಿ 15.21 ದಶಲಕ್ಷ ಟನ್ ಮತ್ತು 2024 16.5 ದಶಲಕ್ಷ ಟನ್ ದೃವೀಕೃತ ನೈಸರ್ಗಿಕ ಇಂಧನ (ಎಲ್‌ಎನ್‌ಜಿ)ವನ್ನು ಇಯು ರಷ್ಯಾದಿಂದ ತರಿಸಿಕೊಂಡಿದೆ.
5. ಯುರೋಪ್-ರಷ್ಯಾ ವ್ಯಾಪಾರವು ಕೇವಲ ಶಕ್ತಿಯನ್ನು ಮಾತ್ರವಲ್ಲದೆ, ರಸಗೊಬ್ಬರಗಳು, ಗಣಿಗಾರಿಕೆ ಉತ್ಪನ್ನಗಳು, ರಾಸಾಯನಿಕಗಳು, ಕಬ್ಬಿಣ ಮತ್ತು ಉಕ್ಕು ಮತ್ತು ಯಂತ್ರೋಪಕರಣಗಳು ಮತ್ತು ಸಾರಿಗೆ ಉಪಕರಣಗಳನ್ನು ಸಹ ಒಳಗೊಂಡಿದೆ.
6. ಅಮೆರಿಕದ ವಿಷಯದಲ್ಲಿ, ತನ್ನ ಪರಮಾಣು ಉದ್ಯಮಕ್ಕೆ ಯುರೇನಿಯಂ ಹೆಕ್ಸಾಫ್ಲೋರೈಡ್, ವಿದ್ಯುತ್ ಚಾಲಿತ ವಾಹನ ಉದ್ಯಮಕ್ಕೆ ಪಲ್ಲಾಡಿಯಮ್, ರಸಗೊಬ್ಬರಗಳು ಮತ್ತು ರಾಸಾಯನಿಕಗಳನ್ನು ರಷ್ಯಾದಿಂದ ಆಮದು ಮಾಡಿಕೊಳ್ಳುವುದನ್ನು ಮುಂದುವರೆಸಿದೆ.
7. ಈ ಹಿನ್ನೆಲೆಯಲ್ಲಿ, ಭಾರತವನ್ನು ಗುರಿಯಾಗಿಸಿಕೊಂಡಿರುವುದು ಅಸಮರ್ಥನೀಯ ಮತ್ತು ಅಸಮಂಜಸವಾಗಿದೆ. ಯಾವುದೇ ಪ್ರಮುಖ ಆರ್ಥಿಕತೆಯಂತೆ, ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿಗಳು ಮತ್ತು ಆರ್ಥಿಕ ಭದ್ರತೆಯನ್ನು ಕಾಪಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ.