ಭಾರತ, ಅಮೆರಿಕ ಸೇರಿ ನಾಲ್ಕು ರಾಷ್ಟ್ರಗಳನ್ನೊಳಗೊಂಡ ಕ್ವಾಡ್‌ ದೇಶಗಳ ಗುಂಪು ಅಪರೂಪದ ಖನಿಜಗಳು, ಇಂಧನ ಹಾಗೂ ಸಮುದ್ರ ಕಣ್ಗಾವಲು ಹೆಚ್ಚಳದ ಜತೆಗೆ, ಇಂಡೋ-ಪೆಸಿಫಿಕ್‌ ಪ್ರದೇಶದಲ್ಲಿ ಚೀನಾದ ಸೇನಾ ಉಪಸ್ಥಿತಿಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಂದರು ಮೂಲಸೌಲಭ್ಯ ಬಲವರ್ಧನೆ ಹಾಗೂ ಪ್ರಾದೇಶಿಕ ಭದ್ರತೆ ಮೇಲ್ದರ್ಜೆಗೇರಿಸಲು ನಿರ್ಧಾರ ಮಾಡಿವೆ.

- ಇಂಡೋಪೆಸಿಫಿಕ್‌ನಲ್ಲಿ ಇಂಧನ ಭದ್ರತೆಗೆ ಆದ್ಯತೆ

- ಸಮುದ್ರ ಕಣ್ಗಾವಲು, ಬಂದರು ಅಭಿವೃದ್ಧಿಗೂ ಒತ್ತು

ನವದೆಹಲಿ: ಭಾರತ, ಅಮೆರಿಕ ಸೇರಿ ನಾಲ್ಕು ರಾಷ್ಟ್ರಗಳನ್ನೊಳಗೊಂಡ ಕ್ವಾಡ್‌ ದೇಶಗಳ ಗುಂಪು ಅಪರೂಪದ ಖನಿಜಗಳು, ಇಂಧನ ಹಾಗೂ ಸಮುದ್ರ ಕಣ್ಗಾವಲು ಹೆಚ್ಚಳದ ಜತೆಗೆ, ಇಂಡೋ-ಪೆಸಿಫಿಕ್‌ ಪ್ರದೇಶದಲ್ಲಿ ಚೀನಾದ ಸೇನಾ ಉಪಸ್ಥಿತಿಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಂದರು ಮೂಲಸೌಲಭ್ಯ ಬಲವರ್ಧನೆ ಹಾಗೂ ಪ್ರಾದೇಶಿಕ ಭದ್ರತೆ ಮೇಲ್ದರ್ಜೆಗೇರಿಸಲು ನಿರ್ಧಾರ ಮಾಡಿವೆ.

ದಿಲ್ಲಿಯಲ್ಲಿ ಮಂಗಳವಾರ 4 ಕ್ವಾಡ್‌ ದೇಶಗಳ ವಿದೇಶಾಂಗ ಸಚಿವ ಸಭೆಯಲ್ಲಿ ಈ ಹೊಸ ಉಪಕ್ರಮಗಳನ್ನು ಘೋಷಿಸಲಾಯಿತು. ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ನೇತೃತ್ವದಲ್ಲಿ ನಡೆದ ಸಭೆಯ ಬಳಿಕ ಅಮೆರಿಕದ ವಿದೇಶಾಂಗ ಸಚಿವ ಮಾರ್ಕೋ ರುಬಿಯೋ, ಆಸ್ಟ್ರೇಲಿಯಾ ವಿದೇಶಾಂಗ ಸಚಿವ ಪೆನ್ನಿ ವಾಂಗ್‌ ಮತ್ತು ಜಪಾನ್‌ ವಿದೇಶಾಂಗ ಸಚಿವ ತೋಶಿಮಿಟ್ಜು ಮೊಟೇಗಿ ನೀಡಿದ ಜಂಟಿ ಹೇಳಿಕೆಯಲ್ಲಿ, ನಾವು ಮುಕ್ತ-ಸ್ವತಂತ್ರ ಇಂಡೋ ಪೆಸಿಫಿಕ್‌ಗೆ ಬೆಂಬಲ ಪುನರುಚ್ಚರಿಸುತ್ತೇವೆ. ಇದು ಈ ಭಾಗದ ರಾಷ್ಟ್ರಗಳ ಸ್ವತಂತ್ರ ಹಾದಿ ನಿರ್ಧರಿಸುವ ಸಾಮರ್ಥ್ಯ ಬಲವರ್ಧನೆ ಹಾಗೂ ಪ್ರತಿರೋಧ ಬೆಳೆಸಲು ಅವಕಾಶ ಮಾಡಿಕೊಡಲಿದೆ. ಈ ನಿಟ್ಟಿನಲ್ಲಿ ಈ ಪ್ರದೇಶಕ್ಕೆ ಅನುಕೂಲಕರವಾದ ಯೋಜನೆ ಮುಂದುವರಿಸಲು, ಸಹಭಾಗಿತ್ವವೃದ್ಧಿಸಲು ನಾವು ಒಪ್ಪಿಗೆ ಸೂಚಿಸುತ್ತೇವೆ ಎಂದಿದ್ದಾರೆ.

ಸಭೆಯಲ್ಲಿ ಹೋರ್ಮುಜ್‌ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಮುಕ್ತ ಸಂಚಾರಕ್ಕೆ ಅವಕಾಶ ನೀಡಬೇಕಿದೆ ಎಂದು ಆಗ್ರಹಿಸಿದ್ದು, ಹಡಗುಗಳಿಂದ ಟೋಲ್‌ ಸಂಗ್ರಹಿಸುವ ಇರಾನ್‌ ಕ್ರಮಕ್ಕೆ ತೀವ್ರ ಆಕ್ರೋಶವೂ ವ್ಯಕ್ತವಾಗಿದೆ. ಪೂರ್ವ ಚೀನಾ ಮತ್ತು ದಕ್ಷಿಣ ಚೀನಾ ಸಮುದ್ರದಲ್ಲಿನ ಸ್ಥಿತಿಗತಿ ಬಗ್ಗೆಯೂ ತೀವ್ರ ಕಳವಳ ವ್ಯಕ್ತವಾಯಿತು.==

ಚೀನಾದ ಮೇಲೆ ಕಣ್ಣಿಟ್ಟು ಭಾರತ- ಅಮೆರಿಕ

ಅಪರೂಪದ ಖನಿಜ ಪೂರೈಕೆ ಬಗ್ಗೆ ಒಪ್ಪಂದ

ನವದೆಹಲಿ: ಆಧುನಿಕ ರಕ್ಷಣಾ, ತಂತ್ರಜ್ಞಾನ ಹಾಗೂ ಶುದ್ಧ ಇಂಧನ ಉದ್ಯಮಗಳಿಗೆ ಅತ್ಯಗತ್ಯವಾದ ಅಪರೂಪದ ಖನಿಜಗಳ(ರೇರ್‌ ಅರ್ಥ್‌ ಮಿನರಲ್ಸ್‌) ಅಂತಾರಾಷ್ಟ್ರೀಯ ಪೂರೈಕೆ ಸರಪಳಿ ಮೇಲೆ ಚೀನಾದ ನೇರ ಹಿಡಿತ ಹೆಚ್ಚುತ್ತಿರುವುದಕ್ಕೆ ಪ್ರತಿಯಾಗಿ ಭಾರತ-ಅಮೆರಿಕ ಮಹತ್ವದ ಪ್ರಮುಖ ಸಹಭಾಗಿತ್ವಕ್ಕೆ ಸಹಿಹಾಕಿದೆ.

ಅಮೆರಿಕ ವಿದೇಶಾಂಗ ಸಚಿವ ಮಾರ್ಕೋ ರುಬಿಯೋ-ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್ ಅವರು ಈ ಕುರಿತ ಒಪ್ಪಂದಕ್ಕೆ ಸಹಿಹಾಕಿದ್ದಾರೆ.

ಇದೊಂದು ಸಮಯೋಜಿತ ಮತ್ತು ಅತ್ಯಗತ್ಯವಾದ ಒಪ್ಪಂದ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಬಣ್ಣಿಸಿದ್ದಾರೆ. ಇದು ಅಪರೂಪದ ಖನಿಜಗಳು ಹಾಗೂ ಈ ಖನಿಜಗಳ ಗಣಿಗಾರಿಕೆ, ಸಂಸ್ಕರಣೆ, ರೀಸೈಕಲಿಂಗ್‌ ಹಾಗೂ ಸಂಬಂಧಿತ ಹೂಡಿಕೆ ಸೇರಿ ಅವುಗಳ ಪೂರೈಕೆ ಸರಪಳಿಯಲ್ಲಿ ಎರಡೂ ದೇಶಗಳ ನಡುವಿನ ಸಹಕಾರ ಇನ್ನಷ್ಟು ಸದೃಢಗೊಳಿಸಲಿದೆ ಎಂದಿದ್ದಾರೆ.

--

4 ಉಪಕ್ರಮಗಳಿಗೆ ಕ್ವಾಡ್‌ ಒಪ್ಪಿಗೆ

1 ಸಮುದ್ರ ಕಣ್ಗಾವಲು: ಇಂಡೋ-ಪೆಸಿಫಿಕ್‌ ಸಮುದ್ರದಲ್ಲಿ ಕ್ವಾಡ್‌ ದೇಶಗಳ ನಡುವೆ ರಿಯಲ್‌ ಟೈಮ್‌ ಮಾಹಿತಿ ವಿನಿಮಯ.

2 ಬಂದರು ಮೂಲಸೌಲಭ್ಯವೃದ್ಧಿ: ಫಿಜಿಯಲ್ಲಿ ಬಂದರು ಮೂಲಸೌಲಭ್ಯವೃದ್ಧಿಗೆ ಜಂಟಿ ಪ್ರಾಯೋಗಿಕ ಯೋಜನೆ. 3 ಅಪರೂಪದ ಖನಿಜಗಳ ಫ್ರೇಮ್‌ವರ್ಕ್‌: ಅಪರೂಪದ ಖನಿಜಗಳ ಗಣಿಗಾರಿಕೆ, ಸಂಸ್ಕರಣೆ ಮತ್ತು ಪೂರೈಕೆಗೆ ಸಂಬಂಧಿಸಿ ಫ್ರೇಮ್‌ವರ್ಕ್‌ಗೆ ಒಪ್ಪಿಗೆ4 ಇಂಡೋ-ಪೆಸಿಫಿಕ್‌ ಇಂಧನ ಭದ್ರತೆ:ಇಂಡೋ ಪೆಸಿಫಿಕ್‌ ಪ್ರದೇಶದಲ್ಲಿ ಇಂಧನ ಭದ್ರತೆ, ಇಂಧನ ಪೂರೈಕೆ ಸರಪಳಿಯ ಭದ್ರತೆ, ಸಹಭಾಗಿತ್ವ.