ಸಾರಾಂಶ
ದೇಶದ ಮೊದಲ ಆಟೋಮೊಬೈಲ್ ಘಟಕದ ರೈಲು ಸೇವೆ ಶುರುವಾಗಿದ್ದು, ಮಾರುತಿ ಕಾರು ಘಟಕದ ಒಳಗೇ ರೈಲು ಮಾರ್ಗನಿರ್ಮಿಸಲಾಗಿದೆ. ಇಲ್ಲಿಂದಲೇ ಕಾರನ್ನು ವ್ಯಾಗನ್‌ಗಳಿಗೆ ಹಾಕಿ ರವಾನೆ ಮಾಡಲಿದ್ದು, ಇದರಿಂದ 3.5 ಕೋಟಿ ಲೀ. ಇಂಧನ ಉಳಿತಾಯವಾಗಲಿದೆ.
ಅಹಮದಾಬಾದ್: ಆಟೋಮೊಬೈಲ್ ಕಾರ್ಖಾನೆಯೊಳಗೇ ಕಾರುಗಳನ್ನು ರೈಲ್ವೆ ಬೋಗಿಯೊಳಗೆ ತುಂಬಿ ಅಲ್ಲಿಂದ ದೇಶದ 15 ನಗರಗಳಿಗೆ ಸರಬರಾಜು ಮಾಡುವ ದೇಶದ ಮೊಟ್ಟಮೊದಲ ಆಟೋಮೊಬೈಲ್ ಇನ್ ಪ್ಲಾಂಟ್ ರೈಲ್ವೆ ಸೈಡಿಂಗ್ ಪ್ರಾಜೆಕ್ಟ್‌ಗೆ ಪ್ರಧಾನಿ ಮೋದಿ ಮಂಗಳವಾರ ಇಲ್ಲಿ ಚಾಲನೆ ನೀಡಿದರು.ಗುಜರಾತ್‌ನ ಮೆಹ್ಸಾಣಾ ಜಿಲ್ಲೆಯ ಹನ್ಸಲ್‌ಪುರದಲ್ಲಿರುವ ಮಾರುತಿ ಸುಜುಕಿ ಘಟಕ ತನ್ನ ಕಾರ್ಖಾನೆ ವ್ಯಾಪ್ತಿಯಲ್ಲಿ 105 ಕೋಟಿ ರು. ವೆಚ್ಚದಲ್ಲಿ ಪ್ರತ್ಯೇಕ ರೈಲ್ವೆ ಹಳಿ ಹಾಕಿಕೊಂಡಿದೆ. ಇಲ್ಲಿ ನೂತನವಾಗಿ ಉತ್ಪಾದನೆಯಾದ ಕಾರುಗಳನ್ನು ರೈಲ್ವೆ ಬೋಗಿಗಳಿಗೆ ತುಂಬಿ ಬಳಿಕ ಆ ರೈಲನ್ನು ಸಮೀಪದ ರೈಲ್ವೆ ಮಾರ್ಗದ ಮೂಲಕ ಸಾಗಿಸಲಾಗುವುದು.
ಭಾರಿ ಉಳಿತಾಯ:ಈ ಯೋಜನೆಯಿಂದಾಗಿ ಕಾರುಗಳನ್ನು ಸಾಗಿಸಲು ನಡೆಸಬೇಕಾಗಿದ್ದ ಲಾರಿಗಳ 50 ಸಾವಿರ ಸಂಚಾರ ಉಳಿಯಲಿದೆ, ಇದಕ್ಕಾಗಿ ಟ್ರಕ್‌ಗಳಿಗೆ ಬಳಸುತ್ತಿದ್ದ 3.5 ಕೋಟಿ ಲೀಟರ್‌ನಷ್ಟು ಇಂಧನ ಉಳಿಯಲಿದೆ, ವಾರ್ಷಿಕ 1650 ಟನ್‌ಗಳಷ್ಟು ಇಂಗಾಲ ಬಿಡುಗಡೆ ಕಡಿತವಾಗಲಿದೆ. 40 ಲಾರಿಗಳಲ್ಲಿ ಸಾಗಿಸಬಹುದಾದಷ್ಟು ಕಾರುಗಳನ್ನು ಒಮ್ಮೆಗೇ ರೈಲಿನಲ್ಲಿ ಸಾಗಿಸಬಹುದು.