ನಿರೀಕ್ಷೆ ಮೀರಿ ದೇಶದ ಜಿಡಿಪಿ 8.2% ಪ್ರಗತಿ!

| Published : Jun 01 2024, 12:46 AM IST / Updated: Jun 01 2024, 05:23 AM IST

ಸಾರಾಂಶ

ಸರ್ಕಾರ 7.7% ಅಭಿವೃದ್ಧಿ ನಿರೀಕ್ಷಿಸಿತ್ತು. ಎಲ್ಲರ ಊಹೆ ಸುಳ್ಳಾಗಿಸಿ ಭಾರೀ ಜಿಗಿತ ಕಂಡಿರುವ ಜಿಡಿಪಿ ಶೇ.8.2ರಷ್ಟು ಪ್ರಗತಿ ಸಾಧಿಸಿ ಮುನ್ನುಗ್ಗುತ್ತಿದೆ.

ನವದೆಹಲಿ: ವಿಶ್ವದಲ್ಲಿನ ಆರ್ಥಿಕ ಅನಿಶ್ಚಯತೆಯ ನಡುವೆಯೂ 2023-24ನೇ ಆರ್ಥಿಕ ಸಾಲಿನಲ್ಲಿ ಭಾರತದ ನಿವ್ವಳ ದೇಶೀಯ ಉತ್ಪನ್ನ (ಜಿಡಿಪಿ) ಬೆಳವಣಿಗೆ ದರ ನಿರೀಕ್ಷೆಗೂ ಮೀರಿ ಶೇ.8.2ರಷ್ಟು ಹೆಚ್ಚಳವಾಗಿದೆ. ಇದು ಅಂದಾಜಿನ ಶೇ.7.7ಕ್ಕಿಂತ ಅಧಿಕವಾಗಿದ್ದು, ದೇಶದ ಆರ್ಥಿಕತೆಗೆ ಟಾನಿಕ್‌ ನೀಡಿದಂತಾಗಿದೆ.

ಉತ್ಪಾದನೆ ಹೆಚ್ಚಳ, ರಫ್ತು ಏರಿಕೆ, ಕೊರೋನಾ ನಂತರ ವ್ಯಾಪಾರ ವಹಿವಾಟು ಹೆಚ್ಚಳ ಸೇರಿದಂತೆ ಹಲವು ಅಂಶಗಳು ಜಿಡಿಪಿ ಏರಿಕೆಗೆ ಕಾರಣವಾಗಿವೆ. ಇದು ಹಾಲಿ ಶೇ.3.5 ಲಕ್ಷ ಕೋಟಿ ಡಾಲರ್‌ ಇರುವ ಆರ್ಥಿಕತೆ 5 ಲಕ್ಷ ಕೋಟಿ ರು. ಆಗಲು ಸಹಕಾರಿ ಆಗಲಿದೆ.

ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, ‘ಇದೇ ಓಘವು ನಮ್ಮ 3ನೇ ಅವಧಿಯಲ್ಲೂ (ಮೋದಿ-3 ಸರ್ಕಾರ) ಮುಂದುವರಿಯಲಿದೆ. ಇದು ಟ್ರೈಲರ್‌ ಮಾತ್ರ’ ಎಂದು ಹರ್ಷಿಸಿದ್ದಾರೆ.

ನಿರೀಕ್ಷೆಗೂ ಮೀರಿದ ಬೆಳವಣಿಗೆ:

ಜಿಡಿಪಿ ಬೆಳವಣಿಗೆ ದರ 2023-24ರ ಕೊನೆಯ ತ್ರೈಮಾಸಿಕದಲ್ಲಿ ಶೇ.7.8ರಷ್ಟು ಏರಿಕೆಯಾಗಿದೆ. ಇದಕ್ಕೂ ಮೊದಲಿನ 3ನೇ ತ್ರೈಮಾಸಿಕದಲ್ಲಿ ಶೇ.8.6ರಷ್ಟು ಏರಿಕೆ ದಾಖಲಾಗಿತ್ತು. ಇದು ಒಟ್ಟಾರೆ ಜಿಡಿಪಿ ಶೇ.8ರ ಗಡಿ ದಾಟಿ ಸಾಧನೆ ಮಾಡಲು ಕಾರಣವಾಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಇಲಾಖೆ ಬಿಡುಗಡೆ ಮಾಡಿರುವ ವಾರ್ಷಿಕ ವರದಿಯಲ್ಲಿ ತಿಳಿಸಿದೆ.

ಕಳೆದ ಸಾಲಿನಲ್ಲಿ (2022-23) ಜಿಡಿಪಿ ಶೇ.7ರಷ್ಟು ಏರಿಕೆಯಾಗಿದ್ದು, ಪ್ರಸ್ತುತ ಸಾಲಿನಲ್ಲಿ ಶೇ.7.7ರಷ್ಟು ಜಿಡಿಪಿ ಏರಿಕೆಯಾಗಬಹುದು ಎಂದು ಕೇಂದ್ರ ಸರ್ಕಾರ ಅಂದಾಜಿಸಿತ್ತು. ಇದೇ ವೇಳೆ, ಮೂಡೀಸ್‌, ಎಸ್‌ ಆ್ಯಂಡ್ ಪಿ ಸೇರಿದಂತೆ ಹಲವು ಸಂಸ್ಥೆಗಳು ಭಾರತದ ಜಿಡಿಪಿ ಶೇ.7ರ ಆಸುಪಾಸಿನಲ್ಲಿ ಏರಬಹುದು ಎಂದಿದ್ದವು. ಆದರೆ ಎಲ್ಲ ನಿರೀಕ್ಷೆ ತಲೆಕೆಳಗು ಮಾಡಿ ಶೇ.8.2ರ ಜಿಡಿಪಿ ದಾಖಲಾಗಿದೆ.

ಆದರೆ 2024ರ ಮೊದಲ 3 ತ್ರೈಮಾಸಿಕದಲ್ಲಿ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಿರುವ ಚೀನಾ ಕೇವಲ ಶೇ.5.3ರಷ್ಟು ಏರಿಕೆ ಕಂಡಿದೆ. ಅದಕ್ಕೆ ಹೋಲಿಸಿದರೆ ಭಾರತದ ಆರ್ಥಿಕತೆ ಬಲಿಷ್ಠವಾಗಿದೆ ಎಂಬುದು ಈಗಿನ ಅಂಕಿ-ಅಂಶಗಳಿಂದ ಸಾಬೀತಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಯುದ್ಧ ಹಾಗೂ ಕೊರೋನಾ ನಂತರ ವಿಶ್ವದ ಆರ್ಥಿಕತೆ ಮಂದಗತಿಯಲ್ಲೇ ಇದೆ. ಅದಕ್ಕೆ ಹೋಲಿಸಿದರೆ ಭಾರತ ಉತ್ತಮ ಸ್ಥಿತಿಯಲ್ಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದು ಟ್ರೈಲರ್ ಮಾತ್ರಜಿಡಿಪಿ ಪ್ರಗತಿ ದರ ನಮ್ಮ ಆರ್ಥಿಕತೆಯ ಶಕ್ತಿಯನ್ನು ತೋರಿಸುತ್ತಿದೆ. ಕಷ್ಟಪಟ್ಟು ದುಡಿಯುವ ಜನರಿಗೆ ಧನ್ಯವಾದಗಳು . ನಾನು ಮೊದಲೇ ಹೇಳಿದಂತೆ ಇದು ಟ್ರೇಲರ್‌ ಮಾತ್ರ. ಇನ್ನಷ್ಟು ಬೆಳವಣಿಗೆಗಳು ಕಾದಿವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.