ಸದ್ದಿಲ್ಲದೆ ದೇಸಿ ಬುಲೆಟ್‌ ರೈಲಿಗೆ ಪ್ಲಾನ್‌!

| Published : Apr 19 2024, 01:02 AM IST / Updated: Apr 19 2024, 06:38 AM IST

ಸಾರಾಂಶ

ಗಂಟೆಗೆ 250 ಕಿಮೀ ವೇಗದಲ್ಲಿ ಓಡುವ ಬುಲೆಟ್‌ ರೈಲಿಗೆ ಚೆನ್ನೈನಲ್ಲಿ ವಿನ್ಯಾಸ ಮಾಡಲಾಗಿದ್ದು, ಇದು ಈಗಾಗಲೇ ಪ್ರಗತಿಯಲ್ಲಿರುವ ಬುಲೆಟ್‌ ರೈಲಲ್ಲ, ಸ್ವದೇಶಿ ಬುಲೆಟ್ ರೈಲು ಆಗಿರಲಿದೆ.

ನವದೆಹಲಿ: ಗಂಟೆಗೆ 250 ಕಿ.ಮೀ. ವೇಗದಲ್ಲಿ ಸಂಚರಿಸುವ ಸ್ವದೇಶಿ ಬುಲೆಟ್‌ ರೈಲು ಅಭಿವೃದ್ಧಿಪಡಿಸುವ ಕೆಲಸವನ್ನು ಕೇಂದ್ರ ಸರ್ಕಾರ ಸದ್ದಿಲ್ಲದೆ ಪ್ರಾರಂಭಿಸಿದೆ.

ದೇಶದಲ್ಲಿ ಸದ್ಯ ಯಾವ ರೈಲು ಕೂಡ ಇಷ್ಟು ವೇಗವನ್ನು ಹೊಂದಿಲ್ಲ. ವಂದೇ ಭಾರತ್‌ ಮಾದರಿಯಲ್ಲೇ ಹೊಸ ರೈಲನ್ನು ನಿರ್ಮಾಣ ಮಾಡಲಾಗುತ್ತಿದೆ. ವಂದೇ ಭಾರತ್‌ ರೈಲು ಗಂಟೆಗೆ ಗರಿಷ್ಠ 220 ಕಿ.ಮೀ. ವೇಗದಲ್ಲಿ ಓಡುವ ಸಾಮರ್ಥ್ಯ ಹೊಂದಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಆಂಗ್ಲಪತ್ರಿಕೆಗಳು ವರದಿ ಮಾಡಿವೆ.

ಚೆನ್ನೈನಲ್ಲಿರುವ ಇಂಟಿಗ್ರಲ್‌ ಕೋಚ್‌ ಫ್ಯಾಕ್ಟರಿ (ಐಸಿಎಫ್‌)ಯಲ್ಲಿ ಸ್ವದೇಶಿ ಬುಲೆಟ್‌ ರೈಲಿನ ವಿನ್ಯಾಸ ಹಂತ ಭಾರತೀಯ ರೈಲ್ವೆಯ ಮೇಲುಸ್ತುವಾರಿಯಲ್ಲಿ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.

ಗಂಟೆಗೆ 250 ಕಿ.ಮೀ.ಗಿಂತ ಅಧಿಕ ವೇಗದಲ್ಲಿ ಸಾಗುವ ರೈಲುಗಳನ್ನು ಜಾಗತಿಕವಾಗಿ ಬುಲೆಟ್‌ ರೈಲು ಎಂದು ಪರಿಗಣಿಸಲಾಗುತ್ತದೆ. ಫ್ರಾನ್ಸ್‌ನ ಟ್ರೇನ್‌ ಎ ಗ್ರ್ಯಾಂಡೆ ವಿಟೆಸ್ಸಿ ಹಾಗೂ ಜಪಾನ್‌ನ ಶಿಂಕಾನ್ಸೇನ್‌ ರೈಲು ಇದೇ ವರ್ಗಕ್ಕೆ ಬರುತ್ತವೆ.

ಜಪಾನ್‌ ತಂತ್ರಜ್ಞಾನವನ್ನೇ ಬಳಸಿಕೊಂಡು ಭಾರತವು ಅಹಮದಾಬಾದ್‌- ಮುಂಬೈ ನಡುವೆ ದೇಶದ ಮೊದಲ ಬುಲೆಟ್‌ ರೈಲು ಮಾರ್ಗ ನಿರ್ಮಾಣ ಮಾಡುತ್ತಿದೆ. ಗಂಟೆಗೆ 320 ಕಿ.ಮೀ. ವೇಗದಲ್ಲಿ ರೈಲುಗಳು ಇಲ್ಲಿ ಸಂಚರಿಸುತ್ತವೆ. ಅದೇ ಮಾರ್ಗದಂತೆ ದೇಶದ ಉತ್ತರ, ದಕ್ಷಿಣ ಹಾಗೂ ಪೂರ್ವ ಭಾಗದಲ್ಲೂ ಬುಲೆಟ್‌ ರೈಲು ಸಂಚಾರ ಆರಂಭಿಸುವುದಾಗಿ ಇತ್ತೀಚೆಗೆ ಪ್ರಧಾನಿ ಘೋಷಿಸಿದ್ದು, ಅಲ್ಲಿ ಸ್ವದೇಶಿ ಬುಲೆಟ್‌ ರೈಲು ಬಳಕೆಯಾಗುವ ಸಾಧ್ಯತೆ ಇದೆ.