ಸಾರಾಂಶ
ಕುವೈತ್ ಸಿಟಿ: ನವ ಕುವೈತ್ ನಿರ್ಮಾಣಕ್ಕೆ ಭಾರತೀಯ ಕಾರ್ಮಿಕರ ಕೌಶಲ್ಯದ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
ಎರಡು ದಿನಗಳ ಕುವೈತ್‌ಗೆ ಭೇಟಿಗಾಗಿ ಶನಿವಾರ ಇಲ್ಲಿಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಬಳಿಕ ಇಲ್ಲಿನ ಮಿನಾ ಅಬ್ದುಲ್ಲಾ ಪ್ರದೇಶದಲ್ಲಿನ ಭಾರತೀಯ ಕಾರ್ಮಿಕರ ಕ್ಯಾಂಪ್‌ಗೆ ಭೇಟಿ ನೀಡಿ ಮಾತನಾಡಿದ ಮೋದಿ, ‘ಭಾರತದಿಂದ ಇಲ್ಲಿಗೆ ಬರಲು 4 ತಾಸು ಸಾಕು. ಆದರೆ ಭಾರತದ ಒಬ್ಬ ಪ್ರಧಾನಿ ಕುವೈತ್‌ಗೆ ಬರಲು 4 ದಶಕಗಳೇ ಬೇಕಾದವು. ನೀವೆಲ್ಲಾ ಭಾರತದ ಬೇರೆಬೇರೆ ಭಾಗಗಳಿಂದ ಬಂದಿದ್ದೀರ. ಆದರೆ ಎಲ್ಲರನ್ನೂ ಒಟ್ಟಾಗಿ ನೋಡಿದರೆ ‘ಮಿನಿ ಇಂಡಿಯಾ’(ಪುಟ್ಟ ಭಾರತ) ನೋಡಿದಂತಾಗುತ್ತದೆ. ಪ್ರತಿ ವರ್ಷ ನೂರಾರು ಭಾರತೀಯರು ಕುವೈತ್‌ಗೆ ಬರುತ್ತಾರೆ. ಅವರೆಲ್ಲಾ ಪ್ರತಿಭೆ, ತಂತ್ರಜ್ಞಾನ ಹಾಗೂ ಸಂಪ್ರದಾಯಗಳ ಮೂಲಕ ಕುವೈತ್‌ಗೆ ಭಾರತೀಯತೆಯ ಬಣ್ಣ ಬಳಿದಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ ನೆರೆದಿದ್ದ ಸುಮಾರು 1500 ಕಾರ್ಮಿಕರ ಸ್ಥಿತಿಗತಿ, ಅನುಭವಿಸುತ್ತಿರುವ ಕಷ್ಟ, ಜೀವನ ಮಟ್ಟ ಕುರಿತು ಸುದೀರ್ಘ ಚರ್ಚೆ ನಡೆಸಿದರು.
ಕುವೈತ್‌ನಲ್ಲಿ ದೇಶದ ಒಟ್ಟು ಜನಸಂಖ್ಯೆಯಲ್ಲಿ ಭಾರತೀಯರ ಪಾಲು ಶೇ.21 (10 ಲಕ್ಷ) ರಷ್ಟಿದೆ. ಜೊತೆಗೆ ಒಟ್ಟು ಕಾರ್ಮಿಕರಲ್ಲಿ ಶೇ.30ರಷ್ಟು (9 ಲಕ್ಷ) ಭಾರತೀಯರೇ ಇದ್ದಾರೆ.
ಕುವೈತ್ ದೊರೆ ಜೊತೆ ದ್ವಿಪಕ್ಷೀಯ ಮಾತುಕತೆ
ಕುವೈತ್ ಸರ್ಕಾರದ ಆಹ್ವಾನದ ಮೇರೆಗೆ 2 ದಿನಗಳ ಭೇಟಿ ಕೈಗೊಂಡಿರುವ ಪ್ರಧಾನಿ ಮೋದಿ, ಈ ಅವಧಿಯಲ್ಲಿ ಕುವೈತ್ ದೊರೆ ಶೇಖ್ ಮೆಶಾಲ್ ಅಲ್ ಅಹಮದ್ ಅಲ್ ಜಬೇರ್ ಅಲ್ ಸಭಾ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಅರೇಬಿಕ್‌ಗೆ ಮಹಾಭಾರತ, ರಾಮಾಯಣಅನುವಾದಿಸಿದವರ ಭೇಟಿಯಾದ ಮೋದಿಕುವೈತ್ ಸಿಟಿ: ಕುವೈತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮಹಾಭಾರತ ಹಾಗೂ ರಾಮಾಯಣವನ್ನು ಅರೇಬಿಕ್ ಭಾಷೆಗೆ ಅನುವಾದಿಸಿ ಪ್ರಕಟಿಸಿದ ಅಬ್ದುಲ್ಲಾಹ್ ಅಲ್-ಬರೌನ್ ಹಾಗೂ ಅಬ್ದುಲ್ ಲತೀಫ್ ಅಲ್- ನಸೆಫ್ ಅವರನ್ನು ಭೇಟಿಯಾದರು. ಈ ವೇಳೆ ಅವರ ಕಾರ್ಯವನ್ನು ಶ್ಲಾಘಿಸಿದ ಪ್ರಧಾನಿ, ಆ ಮಹಾಕಾವ್ಯಗಳ ಅರೇಬಿಕ್ ಪ್ರತಿಗಳಿಗೆ ಸಹಿ ಹಾಕಿದರು.