ಸಾರಾಂಶ
ವಾಷಿಂಗ್ಟನ್: 2023ರ ಮೇ 22ರಂದು ಅಮೆರಿಕದ ಶ್ವೇತಭವನದ ಮೇಲೆ ಬಾಡಿಗೆ ಟ್ರಕ್‌ನಿಂದ ದಾಳಿಗೆ ಯತ್ನಿಸಿದ ಭಾರತ ಮೂಲದ ಸಾಯಿ ವರ್ಷಿತ್ ಕಂದುಲಾ ಎಂಬ 20 ವರ್ಷದ ಯುವಕನಿಗೆ ಅಮೆರಿಕ ನ್ಯಾಯಾಲಯ 8 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ವರ್ಷಿತ್ ಮೂಲತಃ ಹೈದರಾಬಾದ್‌ನವ. ಗ್ರೀನ್ ಕಾರ್ಡ್‌ನೊಂದಿಗೆ ಅಮೆರಿಕ ನಿವಾಸಿಯಾಗಿದ್ದ. ಶ್ವೇತ ಭವನದ ಮೇಲೆ ದಾಳಿ ನಡೆಸಲು 2023ರಲ್ಲಿ ಹಲವು ಸಲ ಪ್ರಯತ್ನಿಸಿದ್ದ ಆತ ಬಾಡಿಗೆ ಟ್ರಕ್ ಆ ವರ್ಷದ ಮೇ 22ರಂದು ಪಡೆದು ಶ್ವೇತ ಭವನದ ಮೇಲೆ ನುಗ್ಗಿಸಿ, ದಾಳಿ ಮಾಡಿ ಬಂಧನಕ್ಕೆ ಒಳಗಾಗಿದ್ದ. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.
ನಾಜಿ ಜರ್ಮನಿಯ ಸಿದ್ಧಾಂತದಿಂದ ಉತ್ತೇಜಿತವಾದ ಸರ್ವಾಧಿಕಾರದೊಂದಿಗೆ ಅಮೆರಿಕದ ಉಸ್ತುವಾರಿ ವಹಿಸುವುದು ಕಂದುಲಾ ಉದ್ದೇಶವಾಗಿತ್ತು. ಉದ್ದೇಶ ಈಡೇರಿಕೆಗಾಗಿ ಅಮೆರಿಕದ ಅಧ್ಯಕ್ಷ ಮತ್ತು ಇತರರನ್ನು ಕೊಲ್ಲಲು ಸಂಚು ರೂಪಿಸಿದ್ದೆ ಎಂದು ಕಂದುಲಾ ಕಳೆದ ವರ್ಷದ ಮೇ.13ರಂದು ಅಮೆರಿಕದ ಸೊತ್ತುಗಳನ್ನು ಹಾನಿ ಮಾಡಿದ್ದಕ್ಕೆ ತಪ್ಪೊಪ್ಪೊಕೊಂಡಿದ್ದ.
ಏನಿದು ಘಟನೆ? ಕಂದುಲಾ 2023ರ ಮೇ. 22ರಂದು ಸೇಂಟ್ ಲೂಯಿಸ್ ಮಿಸ್ಸೌರಿಯಿಂದ ವಾಷಿಂಗ್ಟನ್ ಡಿ.ಸಿ.ಗೆ ತೆರಳಿದ್ದರು. ಅಲ್ಲಿಂದ ಟ್ರಕ್ ಬಾಡಿಗೆ ಪಡೆದು ಶ್ವೇತ ಭವನ ಮತ್ತು ಪಾರ್ಕ್‌ಗೆ ಹಾಕಲಾಗಿದ್ದ ತಡೆಗೋಡೆಗೆ ಟ್ರಕ್ ಡಿಕ್ಕಿ ಹೊಡೆಸಿ ಬಳಿಕ ಪಾದಚಾರಿ ಮಾರ್ಗಕ್ಕೂ ಟ್ರಕ್ ಹರಿಸಿ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದ್ದನು. ಟ್ರಕ್‌ನ ಹಿಂಭಾಗಕ್ಕೆ ಹೋಗಿ ನಾಜಿ ಸ್ವಸ್ತಕಾ ಹೊಂದಿರುವ ಬ್ಯಾನರ್ ಪ್ರದರ್ಶಿಸಿದ್ದರು, ಆ ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದರು.