ಸಾರಾಂಶ
ಭಾರತೀಯ ನೌಕಾಪಡೆಯಿಂದ ಮತ್ತೊಂದು ಯಶಸ್ವಿ ಕಾರ್ಯಾಚರಣೆ ನಡೆದಿದ್ದು, ಏಡೆನ್ ಕೊಲ್ಲಿಯಲ್ಲಿ ಕ್ಷಿಪಣಿ ದಾಳಿಗೆ ತುತ್ತಾಗಿದ್ದ ಬಾರ್ಬಡೋಸ್‌ನ ಸರಕು ಸಾಗಾಣೆ ಹಡಗಿನಲ್ಲಿದ್ದ ಒಬ್ಬ ಭಾರತೀಯನೂ ಸೇರಿದಂತೆ 21 ಸಿಬ್ಬಂದಿಯನ್ನು ರಕ್ಷಿಸಿದೆ.
ನವದೆಹಲಿ: ಏಡನ್ ಕೊಲ್ಲಿಯಲ್ಲಿ ಕ್ಷಿಪಣಿ ದಾಳಿಗೆ ತುತ್ತಾದ ಬಾರ್ಬಡೋಸ್ ಹಡಗಿನಲ್ಲಿದ್ದ ಒಬ್ಬ ಭಾರತೀಯನೂ ಸೇರಿದಂತೆ 21 ಸಿಬ್ಬಂದಿಯನ್ನು ರಕ್ಷಣೆ ಮಾಡುವಲ್ಲಿ ಭಾರತೀಯ ನೌಕಾಪಡೆ ಗುರುವಾರ ಯಶಸ್ವಿಯಾಗಿದೆ. ಈ ಕುರಿತು ಮಾಹಿತಿ ನೀಡಿದ ನೌಕಾಪಡೆಯ ವಕ್ತಾರರಾದ ವಿವೇಕ್ ಮಾಧ್ವಾಲ್, ‘ಭಾರತೀಯ ನೌಕಾಪಡೆಯು ಕ್ಷಿಪಣಿ ದಾಳಿಗೆ ತುತ್ತಾಗಿದ್ದ ಬಾರ್ಬಡೋಸ್ ರಾಷ್ಟ್ರದ ಸರಕು ಸಾಗಾಣೆ ಹಡಗು ಎಂವಿ ಟ್ರೂ ಕಾನ್ಫಿಡೆನ್ಸ್‌ನಲ್ಲಿದ್ದ ಒಬ್ಬ ಭಾರತೀಯನೂ ಸೇರಿದಂತೆ 21 ಸಿಬ್ಬಂದಿಯನ್ನು ರಕ್ಷಿಸಿ ಜಿಬೌತಿಗೆ ಕಳುಹಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ನೌಕಾಪಡೆ ಐಎನ್‌ಎಸ್ ಕೋಲ್ಕತಾ ಸಮರನೌಕೆಯ ಜೊತೆಗೆ ಹಲವು ಹೆಲಿಕಾಪ್ಟರ್‌ಗಳು ಮತ್ತು ದೋಣಿಗಳನ್ನು ಬಳಸಿದೆ’ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಕಡಲ್ಗಳ್ಳರಿಂದ ದಾಳಿಗೆ ಒಳಗಾದ ಹಲವು ಹಡಗುಗಳನ್ನು ಭಾರತೀಯ ನೌಕಾಪಡೆ ರಕ್ಷಿಸಿತ್ತು.