ಮೋದಿ ಜೊತೆ ಬಾಹ್ಯಾಕಾಶ ಅನುಭವ ಹಂಚಿಕೊಂಡ ಶುಕ್ಲಾ

| Published : Aug 19 2025, 01:00 AM IST

ಸಾರಾಂಶ

ಜೂ.25ರಿಂದ ಜು.15ರವರೆಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ತಂಗಿದ್ದ ಶುಭಾಂಶು ಶುಕ್ಲಾ, ಸೋಮವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ತಮ್ಮ ಬಾಹ್ಯಾಕಾಶ ಅನುಭವ ಹಂಚಿಕೊಂಡರು.

ಮೋದಿ ನೀಡಿದ್ದ ಹೋಂವರ್ಕ್‌ ಪೂರ್ಣಗೊಳಿಸಿರುವೆ: ಶುಕ್ಲಾ

ನವದೆಹಲಿ: ಜೂ.25ರಿಂದ ಜು.15ರವರೆಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ತಂಗಿದ್ದ ಶುಭಾಂಶು ಶುಕ್ಲಾ, ಸೋಮವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ತಮ್ಮ ಬಾಹ್ಯಾಕಾಶ ಅನುಭವ ಹಂಚಿಕೊಂಡರು.

ತಮ್ಮ ಕಚೇರಿಗೆ ಶುಕ್ಲಾ ಆಗಮಿಸುತ್ತಿದ್ದಂತೆ ಮೋದಿ ಅವರು ಆತ್ಮೀಯವಾಗಿ ಬರಮಾಡಿಕೊಂಡರು. ಶುಕ್ಲಾ ಅವರಿಗೆ ಪ್ರೀತಿಯ ಅಪ್ಪುಗೆ ನೀಡಿ, ಹೆಗಲ ಮೇಲೆ ಕೈ ಹಾಕಿ ಸ್ವಾಗತಿಸಿದರು.

ಶುಕ್ಲಾ ಅವರು ಆ್ಯಕ್ಸಿಯೋ 4 ಮಿಷನ್‌ನ ಪ್ರತಿಕೃತಿ, ಐಎಸ್‌ಎಸ್‌ಗೆ ಕೊಂಡೊಯ್ದಿದ್ದ ಭಾರತದ ರಾಷ್ಟ್ರಧ್ವಜವನ್ನು ಪ್ರಧಾನಿ ಅವರಿಗೆ ಉಡುಗೊರೆಯಾಗಿ ನೀಡಿದರು. ಬಳಿಕ ಐಎಸ್‌ಎಸ್‌ನಲ್ಲಿ ತೆಗೆದುಕೊಂಡ ಚಿತ್ರಗಳು ತೋರಿಸಿ, ಅಲ್ಲಿನ ಅನುಭವಗಳ ಬಗ್ಗೆ ಮೋದಿ ಅವರಿಗೆ ವಿವರಿಸಿದರು. ಇದೇ ವೇಳೆ ‘ತಮ್ಮೆಲ್ಲಾ ಅನುಭವವನ್ನು ದಾಖಲಿಸುವಂತೆ ಮೋದಿ ಅವರು ನೀಡಿದ್ದ ಹೋಂವರ್ಕ್‌ ಸಂಪೂರ್ಣವಾಗಿ ಪೂರ್ಣಗೊಳಿಸಿದ್ದಾಗಿ’ ಶುಕ್ಲಾ ಹೇಳಿದರು.

‘ಶುಕ್ಲಾ ಅವರ ಕೆಲಸಕ್ಕೆ ಇಡೀ ದೇಶಕ್ಕೆ ಹೆಮ್ಮೆಯಿದೆ. ಅವರೊಂದಿಗೆ ವಿಜ್ಞಾನ, ಅಂತರಿಕ್ಷ ಅನುಭವ ಕುರಿತು ವಿಶಾಲವಾದ ವಿಷಯಗಳ ಬಗ್ಗೆ ಚರ್ಚಿಸಲಾಯಿತು’ ಎಂದು ಮೋದಿ ಎಕ್ಸ್ ಮಾಡಿದ್ದಾರೆ.

ಸಂಸತ್‌ನಲ್ಲಿ ಮೆಚ್ಚುಗೆ:

ಶುಭಾಂಶು ಶುಕ್ಲಾ ಅವರ ಗಗನಯಾತ್ರೆಯನ್ನು ಸೋಮವಾರ ಸಂಸತ್‌ನಲ್ಲಿ ಪ್ರಸ್ತಾಪಿಸಿ ಮೆಚ್ಚುಗೆ ವ್ಯಕ್ತಪಡಿಸಲಾಯಿತು. ವಿಪಕ್ಷಗಳ ಗದ್ದಲಗಳ ನಡುವೆಯೇ ಕೇಮದ್ರ ಸಚಿವ ಜಿತೇಂದ್ರ ಸಿಂಗ್‌ ಅವರು ವಿಷಯ ಪ್ರಸ್ತಾಪಿಸಿ ಗೌರವಿಸಿದರು.