ಕೆನಡಾ : ಬಸ್ಸಿಗೆ ಕಾಯುತ್ತಿದ್ದ ವೇಳೆ ಆಕಸ್ಮಿಕವಾಗಿ ಹಾರಿಬಂದ ಗುಂಡು- ಹರ್‌ಸಿಮ್ರತ್‌ ಸಾವು

| N/A | Published : Apr 20 2025, 01:48 AM IST / Updated: Apr 20 2025, 04:34 AM IST

ಸಾರಾಂಶ

ಬಸ್ಸಿಗೆ ಕಾಯುತ್ತಿದ್ದ ವೇಳೆ ಆಕಸ್ಮಿಕವಾಗಿ ಹಾರಿಬಂದ ಗುಂಡು ತಗುಲಿ ಭಾರತ ಮೂಲದ ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿದ ಘಟನೆ ಕೆನಡಾದ ಒಂಟಾರಿಯೋದಲ್ಲಿ ನಡೆದಿದೆ.

ನ್ಯೂಯಾರ್ಕ್‌ : ಬಸ್ಸಿಗೆ ಕಾಯುತ್ತಿದ್ದ ವೇಳೆ ಆಕಸ್ಮಿಕವಾಗಿ ಹಾರಿಬಂದ ಗುಂಡು ತಗುಲಿ ಭಾರತ ಮೂಲದ ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿದ ಘಟನೆ ಕೆನಡಾದ ಒಂಟಾರಿಯೋದಲ್ಲಿ ನಡೆದಿದೆ. ಮೃತಳನ್ನು ಹ್ಯಾಮಿಲ್ಟನ್‌ನ ಮೊಹಾಕ್ ಕಾಲೇಜಿನ ವಿದ್ಯಾರ್ಥಿ ಹರ್‌ಸಿಮ್ರತ್‌ ಧಾವಾ ಎಂದು ಗುರುತಿಸಲಾಗಿದೆ. 

ಬುಧವಾರ ಸಂಜೆ ಸ್ಥಳೀಯ ಕಾಲಮಾನ 7:30ರ ಹೊತ್ತಿಗೆ ರಂಧಾವಾ ಕೆಲಸಕ್ಕೆ ಹೋಗಲು ಬಸ್ಸಿಗಾಗಿ ಕಾಯುತ್ತಿದ್ದ ವೇಳೆ ವಾಹನದೊಳಗಿದ್ದ ವ್ಯಕ್ತಿಯೊಬ್ಬ ಹಾರಿಸಿದ ಗುಂಡು ಆಕೆಯ ಎದೆಗೆ ತಗುಲಿತ್ತು. ಕೂಡಲೇ ಅವಳನ್ನು ಆಸ್ಪತ್ರೆಗೆ ದಾಖಲಿಸಿದರೂ ಬದುಕುಳಿಯಲಿಲ್ಲ. ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಾವು ಆಕೆಯ ಪರಿವಾರದೊಂದಿಗೆ ಸಂಪರ್ಕದಲ್ಲಿದ್ದು, ಅಗತ್ಯ ನೆರವು ಎಂದು ನೀಡುತ್ತಿದ್ದೇವೆ ಎಂದು ಸ್ಥಳೀಯ ಭಾರತೀಯ ರಾಯಭಾರಿ ಕಚೇರಿ ತಿಳಿಸಿದೆ.

ಡ್ರಗ್ಸ್‌ ಸೇವನೆ ಆರೋಪ ಕೇಸಲ್ಲಿ ಮಲಯಾಳಂ ನಟ ಚಾಕೋ ಅರೆಸ್ಟ್‌

ಕೊಚ್ಚಿ: ಮಾದಕವಸ್ತು ಸೇವನೆ ಆರೋಪಕ್ಕೆ ಸಂಬಂಧಿಸಿದಂತೆ ಮಲಯಾಳಂ ನಟ ಶೈನ್‌ ಟಾಮ್‌ ಚಾಕೋ ಅವರನ್ನು ಶನಿವಾರ ಕೊಚ್ಚಿ ಪೊಲೀಸರು ಬಂಧಿಸಿದ್ದಾರೆ. ಬುಧವಾರ ಹೋಟೆಲ್‌ ಒಂದರ ಮೇಲೆ ಮಾದಕ ದ್ರವ್ಯ ವಿರೋಧಿ ವಿಶೇಷ ಕಾರ್ಯಪಡೆ ದಾಳಿ ನಡೆಸಿದಾಗ ಹೋಟೆಲ್‌ನ ಮೂರನೇ ಮಹಡಿಯಿಂದ ಹಾರಿ ಪರಾರಿಯಾಗಿದ್ದ ಆರೋಪದ ಸಂಬಂಧ ಶೈನ್‌ ಅವರನ್ನು 4 ತಾಸು ವಿಚಾರಣಗೆ ಒಳಪಡಿಸಿದ್ದು, ಬಳಿಕ ಬಂಧಿಸಲಾಗಿದೆ. 

ಅವರ ವಿರುದ್ಧ ಮಾದಕ ದ್ರವ್ಯಗಳು ಮತ್ತು ಮನೋವಿಕೃತ ವಸ್ತುಗಳ ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ. ಚಾಕೋ ವಿರುದ್ಧ ಇತ್ತೀಚೆಗಷ್ಟೇ ನಟಿ ವಿನ್ಸಿ ಅಲೋಶಿಯಸ್‌, ಸಿನಿಮಾ ಚಿತ್ರೀಕರಣದ ವೇಳೆ ಡ್ರಗ್ಸ್‌ ಸೇವಿಸಿ ಅನುಚಿತವಾಗಿ ವರ್ತಿಸಿದ್ದಾಗಿ ಆರೋಪ ಮಾಡಿದ್ದರು.

ದಿಲ್ಲಿ: ಬಹುಮಹಡಿ ಕಟ್ಟಡ ಕುಸಿದು 11 ಜನರು ಸಾವು

ನವದೆಹಲಿ: ಇಲ್ಲಿನ ಈಶಾನ್ಯ ಭಾಗದಲ್ಲಿ ಶನಿವಾರ ಮುಂಜಾನೆ ಬಹುಮಹಡಿ ಕಟ್ಟಡ ಕುಸಿದಿದ್ದು, ಅದರೊಳಗಿದ್ದ 22 ಜನರ ಪೈಕಿ 11 ಜನರು ಸಾವನ್ನಪ್ಪಿದ್ದಾರೆ. ಮಿಕ್ಕ 11 ಜನರು ಗಾಯಗೊಂಡಿದ್ದಾರೆ. ಶಕ್ತಿವಿಹಾರನಲ್ಲಿದ್ದ 4 ಅಂತಸ್ತಿನ ಕಟ್ಟಡ ಮುಂಜಾನೆ 3 ಗಂಟೆ ವೇಳೆಗೆ ಕುಸಿದಿದೆ. 

ಕುಸಿತದ ರಭಸಕ್ಕೆ ಸಂಪೂರ್ಣ ಕಟ್ಟಡ ನೆಲಸಮವಾಗಿದೆ. ಕೂಡಲೇ ಅಗ್ನಿಶಾಮಕ ಸಿಬ್ಬಂದಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಪೊಲೀಸರು ರಕ್ಷಣಾ ಕಾರ್ಯ ನಡೆಸಿದ್ದಾರೆ. ಈ ವೇಳೆಗಾಗಲೇ ಕಟ್ಟಡದ ಮಾಲೀಕ ತೆಹ್ಸೀನ್‌ ಸೇರಿ 11 ಜನರು ಮೃತಪಟ್ಟಿದ್ದಾರೆ. ಮಿಕ್ಕ 11 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕುಸಿತಕ್ಕೆ ಕಟ್ಟಡ ನೆಲಮಾಳಿಗೆಯಲ್ಲಿ ನಡೆಯುತ್ತಿದ್ದ ಕಾಮಗಾರಿ ಕಾರಣವಿರಬಹುದು ಎಂದು ಶಂಕಿಸಲಾಗಿದೆ.

ಮಾಲೆಗಾಂವ್ ಸ್ಫೋಟ ಕೇಸಿನ ವಿಚಾರಣೆ 17 ವರ್ಷದ ಬಳಿಕ ಅಂತ್ಯ

ಮುಂಬೈ: ಮಹಾರಾಷ್ಟ್ರದ ಮಾಲೆಗಾಂವ್‌ನಲ್ಲಿ 2008ರಲ್ಲಿ ನಡೆದ ಸ್ಫೋಟದ ವಿಚಾರಣೆ 17 ವರ್ಷಗಳ ಬಳಿಕ ಇದೀಗ ಅಂತ್ಯಗೊಂಡಿದ್ದು, ಎನ್‌ಐಎ ಕೋರ್ಟ್‌ ಮೇ 8ಕ್ಕೆ ತನ್ನ ತೀರ್ಪು ಪ್ರಕಟಿಸಲಿದೆ. ಇದೇ ವೇಳೆ ಪ್ರಕರಣದ ದೋಷಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಎನ್‌ಐಎ ಕೋರಿದೆ. ಮುಂಬೈನಿಂದ 200 ಕಿ.ಮೀ. ದೂರದ ಮಾಲೇಗಾಂವ್‌ನಲ್ಲಿ ಬೈಕ್‌ಗೆ ಕಟ್ಟಲಾಗಿದ್ದ ಸ್ಫೋಟಕ ಸಿಡಿದು 6 ಮಂದಿ ಸಾವನ್ನಪ್ಪಿ, 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

 ಘಟನೆಯು ರಂಜಾನ್‌ ತಿಂಗಳಲ್ಲಿ ನಡೆದಿದ್ದು, ಮುಸ್ಲಿಮರನ್ನು ಬೆದರಿಸಿ, ಕೋಮು ಉದ್ವಿಗ್ನತೆ ಸೃಷ್ಟಿಸಿ, ರಾಜ್ಯದ ಆಂತರಿಕ ಭದ್ರತೆಗೆ ಬೆದರಿಕೆ ಹಾಕಿ, ಹಿಂದೂ ರಾಷ್ಟ್ರ ಸ್ಥಾಪಿಸಲು ಈ ಸಂಚು ರೂಪಿಸಲಾಗಿತ್ತು ಎಂದು ಎನ್‌ಐಎ ಆರೋಪಿಸಿದೆ. ಘಟನೆ ಸಂಬಂಧ ಮಾಜಿ ಸಂಸದೆಯಾದ ಬಿಜೆಪಿ ನಾಯಕಿ ಪ್ರಜ್ಞಾ ಠಾಕೂರ್, ಕರ್ನಲ್‌ ಪ್ರಸಾದ್‌ ಪುರೋಹಿತ್‌, ಮೇಜರ್‌ ರಮೇಶ್‌ ಉಪಾಧ್ಯಾಯ್‌ ಸೇರಿದಂತೆ ಹಲವರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ ಮತ್ತು ಐಪಿಸಿ ಅಡಿ ಪ್ರಕರಣ ದಾಖಲಿಸಲಾಗಿದೆ.