6 ಪಹಲ್ಗಾಂ ಉಗ್ರರು ಪರಾರಿ ಶಂಕೆ : ಲಂಕಾದಲ್ಲಿ ವಿಮಾನ ತಪಾಸಣೆ

| N/A | Published : May 04 2025, 01:31 AM IST / Updated: May 04 2025, 06:34 AM IST

6 ಪಹಲ್ಗಾಂ ಉಗ್ರರು ಪರಾರಿ ಶಂಕೆ : ಲಂಕಾದಲ್ಲಿ ವಿಮಾನ ತಪಾಸಣೆ
Share this Article
  • FB
  • TW
  • Linkdin
  • Email

ಸಾರಾಂಶ

  ಉಗ್ರರು ಚೆನ್ನೈನಿಂದ ಶ್ರೀಲಂಕಾಕ್ಕೆ ವಿಮಾನದ ಮೂಲಕ ಪರಾರಿಯಾಗಿದ್ದಾರೆ ಎಂಬ ಮಾಹಿತಿ ಮೇರೆಗೆ ಶ್ರೀಲಂಕಾ ಪೊಲೀಸರು ಶನಿವಾರ ಪರಿಶೀಲನೆ ನಡೆಸಿದ್ದಾರೆ  

 ಕೊಲಂಬೊ : ಜಮ್ಮು-ಕಾಶ್ಮೀರದ ಪಹಲ್ಗಾಂ ದಾಳಿಯಲ್ಲಿ ಭಾಗಿಯಾದ 6 ಶಂಕಿತ ಉಗ್ರರು ಚೆನ್ನೈನಿಂದ ಶ್ರೀಲಂಕಾಕ್ಕೆ ವಿಮಾನದ ಮೂಲಕ ಪರಾರಿಯಾಗಿದ್ದಾರೆ ಎಂಬ ಮಾಹಿತಿ ಮೇರೆಗೆ ಶ್ರೀಲಂಕಾ ಪೊಲೀಸರು ಶನಿವಾರ ವಿಮಾನದ ಪರಿಶೀಲನೆ ನಡೆಸಿದ್ದಾರೆ. ಆದರೆ ತಪಾಸಣೆ ಬಳಿಕ ಯಾವುದೇ ಶಂಕಿತರು ಪತ್ತೆ ಆಗಿಲ್ಲ.

ಚೆನ್ನೈನಿಂದ ಹೊರಟಿದ್ದ ಶ್ರೀಲಂಕಾ ಏರ್‌ಲೈನ್ಸ್‌ನ ಯುಎಲ್122 ವಿಮಾನ, ಶನಿವಾರ ಬೆಳಿಗ್ಗೆ 11:59ಕ್ಕೆ ಲಂಕಾದ ಬಂಡಾರನಾಯಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್‌ ಆಯಿತು. ಆಗ ವಿಮಾನವನ್ನು ಸಮಗ್ರ ಭದ್ರತಾ ತಪಾಸಣೆಗೆ ಒಳಪಡಿಸಲಾಗಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಲಂಕಾ ಪೊಲೀಸರು, ‘ಪಹಲ್ಗಾಂ ದಾಳಿಯ 6 ಶಂಕಿತ ಉಗ್ರರು ಶ್ರೀಲಂಕನ್ ಏರ್‌ಲೈನ್ಸ್ ವಿಮಾನದ ಮೂಲಕ ಕೊಲಂಬೊಕ್ಕೆ ಪರಾರಿಯಾಗಿದ್ದಾರೆಂದು ಭಾರತೀಯ ಅಧಿಕಾರಿಗಳು ಶ್ರೀಲಂಕಾಕ್ಕೆ ಮಾಹಿತಿ ನೀಡಿದ್ದರು. ಚೆನ್ನೈ ಪ್ರದೇಶ ನಿಯಂತ್ರಣಾ ಕೇಂದ್ರ ಉಗ್ರರ ಕುರಿತು ಏರ್‌ಲೈನ್ಸ್‌ಗೆ ಎಚ್ಚರಿಕೆ ಸಂದೇಶ ರವಾನಿಸಿತ್ತು. ಅವರ ಮಾಹಿತಿ ಮೇರೆಗೆ ಶ್ರೀಲಂಕಾ ಪೊಲೀಸರು, ಶ್ರೀಲಂಕಾ ವಾಯುಪಡೆ ಮತ್ತು ವಿಮಾನ ನಿಲ್ದಾಣದ ಭದ್ರತಾ ಘಟಕಗಳು ಜಂಟಿಯಾಗಿ ಶೋಧ ಕಾರ್ಯಾಚರಣೆಯನ್ನು ನಡೆಸಿವೆ. ಆದರೆ ಯಾವುದೇ ಶಂಕಿತ ವ್ಯಕ್ತಿ ಪತ್ತೆಯಾಗಿಲ್ಲ’ ಎಂದಿದ್ದಾರೆ.

‘ಅಲ್ಟ್ರಾ’ ಆ್ಯಪ್ ಬಳಸಿ ಉಗ್ರರ ರಹಸ್ಯ ಸಂಭಾಷಣೆ

ಶ್ರೀನಗರ: ಪಾಕಿಸ್ತಾನದಲ್ಲಿರುವ ಉಗ್ರ ದಾಳಿಯ ಮಾಸ್ಟರ್‌ಮೈಂಡ್‌ಗಳು ಈಗ ಕಾಶ್ಮೀರದಲ್ಲಿರುವ ಉಗ್ರರು ಮತ್ತು ಉಗ್ರರ ಬೆಂಬಲಿಗರೊಂದಿಗೆ, ರಹಸ್ಯ ಕಾಪಾಡುವ ವಿಶೇಷ ಭದ್ರತೆಯುಳ್ಳ ‘ಅಲ್ಟ್ರಾ’ ಆ್ಯಪ್ ಮೂಲಕ ಮಾತುಕತೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ತನಿಖೆ ವೇಳೆ ಬೆಳಕಿಗೆ ಬಂದಿದೆ.ಪಹಲ್ಗಾಂ ದಾಳಿಯ ಸಮಯದಲ್ಲಿ, ಜಮ್ಮು ಕಾಶ್ಮೀರದ ತ್ರಾಲ್‌ನಲ್ಲಿ ಈ ಆ್ಯಪ್ ಬಳಕೆಯಾಗಿರುವ ಪುರಾವೆ ದೊರಕಿದೆ. ದಾಳಿಗೂ ಮುನ್ನ ಪಹಲ್ಗಾಂನಲ್ಲಿ ಉಗ್ರರಿಗೆ ಸಹಾಯ ಮತ್ತು ನಿರ್ದೇಶನ ನೀಡುವ ಅಗತ್ಯತೆಯ ಬಗ್ಗೆ ಸ್ಥಳೀಯ ಉಗ್ರ ಬೆಂಬಲಿಗರು ಚರ್ಚಿಸುತ್ತಿರುವ ಚಾಟ್‌ಗಳು ಪತ್ತೆಯಾಗಿವೆ. ಅವರಿಗೆ ಉಗ್ರರ ಪಿತೂರಿಯ ಬಗ್ಗೆ ತಿಳಿದಿತ್ತು. ಉಗ್ರರಿಗೆ ಮಾರ್ಗದರ್ಶನ ಮತ್ತು ಶಸ್ತ್ರಾಸ್ತ್ರಗಳ ವ್ಯವಸ್ಥೆ ಮಾಡಿದ್ದರು ಎಂಬ ಶಂಕೆ ವ್ಯಕ್ತವಾಗಿದ್ದು, 15 ಮಂದಿಯ ಮೇಲೆ ತನಿಖಾ ಸಂಸ್ಥೆಗಳು ಕಣ್ಣಿಟ್ಟಿವೆ.ಅಲ್ಟ್ರಾ ಆ್ಯಪ್‌ನಲ್ಲಿ ನಡೆಸುವ ಮಾತುಕತೆಗಳು ಸಂಪೂರ್ಣ ಎನ್‌ಕ್ರಿಪ್ಟ್ ಆಗಿದ್ದು, ಸುರಕ್ಷಿತವಾಗಿರುತ್ತವೆ. ಸಂದೇಶ ಕಳಿಸದವನ ಮತ್ತು ಸ್ವೀಕರಿಸಿದವನ ಮೊಬೈಲ್‌ನಿಂದ ಯಾವುದೇ ಮಾಹಿತಿ ಸೋರಿಕೆಯಾಗುವ ಅಪಾಯವಿರುವುದಿಲ್ಲ.