ಸಾರಾಂಶ
ನವದೆಹಲಿ: ಭಾರತೀಯರು ಈ ವರ್ಷದ ಜನವರಿಯಿಂದ ಏಪ್ರಿಲ್‌ನವರೆಗೆ ಡಿಜಿಟಲ್ ಅರೆಸ್ಟ್ ವಂಚನೆ ಪ್ರಕರಣದಲ್ಲಿ ಸುಮಾರು 120.30 ಕೋಟಿ ರು. ಹಣವನ್ನು ಕಳೆದುಕೊಂಡಿದ್ದಾರೆ ಎನ್ನುವ ಆಘಾತಕಾರಿ ಅಂಕಿ ಅಂಶವನ್ನು ಕೇಂದ್ರ ಗೃಹ ಇಲಾಖೆ ಬಿಚ್ಚಿಟ್ಟಿದೆ.
ಪ್ರಧಾನಿ ನರೇಂದ್ರ ಮೋದಿ ಭಾನುವಾರದ ಮನ್ ಕೀ ಬಾತ್‌ನಲ್ಲಿ ‘ಸೈಬರ್ ವಂಚನೆ, ಡಿಜಿಟಲ್ ಅರೆಸ್ಟ್ ಬಗ್ಗೆ ಪ್ರಸ್ತಾಪಿಸಿದ ಬೆನ್ನಲ್ಲೇ ಕೇಂದ್ರ ಗೃಹ ಇಲಾಖೆಯು, ಸೈಬರ್ ಅಪರಾಧ ಬಗ್ಗೆ ಸಿದ್ಧ ಪಡಿಸಿದ ಅಂಕಿ ಅಂಶವನ್ನು ಪ್ರಕಟಿಸಿದೆ.
‘ಮಯನ್ಮಾರ್, ಲಾವೋಸ್ ಮತ್ತು ಕಾಂಬೋಡಿಯಾಗಳಿಂದ ಡಿಜಿಟಲ್ ಅರೆಸ್ಟ್ ವಂಚನೆ ಹೆಚ್ಚಾಗಿದೆ. ಜನವರಿಯಿಂದ ಏಪ್ರಿಲ್‌ವರೆಗಿನ ಅಂಕಿ ಅಂಶದ ಪ್ರಕಾರ ಡಿಜಿಟಲ್ ಅರೆಸ್ಟ್, ಟ್ರೇಡಿಂಗ್ ವಂಚನೆ, ಹೂಡಿಕೆ ವಂಚನೆ, ಡೇಟಿಂಗ್ ಆ್ಯಪ್‌ಗಳಿಂದ ಶೇ.46ರಷ್ಟು ಜನ 1776 ಕೋಟಿ ರು. ಕಳೆದುಕೊಂಡಿದ್ದಾರೆ. ಇದರಲ್ಲಿ ₹120.30 ಕೋಟಿ ಡಿಜಿಟಲ್ ಅರೆಸ್ಟ್‌ನಿಂದ ಕಳೆದುಕೊಂಡಿದ್ದರೆ, ಟ್ರೇಡಿಂಗ್ ₹1020.48 ಕೋಟಿ , ಹೂಡಿಕೆ ₹222.58 ಕೋಟಿ ಡೇಟಿಂಗ್ ಆ್ಯಪ್ ₹13.23 ಕೋಟಿಗಳಿಂದ ಕಳೆದುಕೊಂಡಿದ್ದಾರೆ’ ಎಂದು ಅಂಕಿ ಅಂಶ ಹೇಳಿದೆ.
ಹೋಟೆಲ್‌ನಲ್ಲಿ 30 ಗಂಟೆ ಡಿಜಿಟಲ್ ಅರೆಸ್ಟ್ ಆಗಿದ್ದ ಟೆಕ್ಕಿ!
ಹೈದರಾಬಾದ್: ಡಿಜಿಟಲ್ ಅರೆಸ್ಟ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ ಹೊತ್ತಿನಲ್ಲೇ ಹೈದ್ರಾಬಾದ್‌ನ ಟೆಕ್ಕಿಯೊಬ್ಬ ಹೋಟೆಲ್‌ನಲ್ಲಿ ಸತತ 30 ಗಂಟೆಗಳ ಕಾಲ ಡಿಜಿಟಲ್ ಅರೆಸ್ಟ್ ಆಗಿದ್ದ ಘಟನೆ ನಡೆದಿದೆ. ಆತನ ಅದೃಷ್ಟಕ್ಕೆ ಮೊಬೈಲ್ ನೆಟ್ವರ್ಕ್ ಕಟ್ ಆದ ಕಾರಣ ಆತ ಸೈಬರ್ ವಂಚಕರಿಂದ ಪಾರಾಗಿದ್ದಾನೆ.
ನಡೆದಿದ್ದೇನು?:ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಂತ್ರಸ್ತನ ಆಧಾರ್ ಸಂಖ್ಯೆ ಪತ್ತೆಯಾಗಿದೆ ಎಂದು ಶನಿವಾರ ನಸುಕಿನ 3 ಗಂಟೆಗೆ ಮುಂಬೈ ಪೊಲೀಸರ ಹೆಸರಲ್ಲಿ ಕರೆ ಮಾಡಿದ್ದ ಆರೋಪಿಗಳು, ಆತನ ಖಾತೆಯ ಪರಿಶೀಲನೆ ಮುಗಿಯುವ ತನಕ ವೀಡಿಯೋ ಕರೆಯ ಮೂಲಕ ತಮ್ಮೊಂದಿಗೆ ಸಂಪರ್ಕದಲ್ಲಿರಬೇಕು ಎಂದು ಹೇಳಿದ್ದರು.
ಈ ವಿಷಯ ಹೊರಬಂದರೆ ಕಾನೂನು ಕ್ರಮ ಎದುರಿಸಬೇಕೆಂದು ಬೆದರಿಸಿದ ಆರೋಪಿಗಳು, ಪರಿವಾರದಿಂದ ದೂರ ಉಳಿಯುವಂತೆ ಸೂಚಿಸಿದ್ದರು. ಅದರಂತೆ ತುರ್ತು ಸಭೆಯೊಂದಕ್ಕೆ ಹೋಗುವುದಾಗಿ ಪತ್ನಿ ಹಾಗೂ ಪುತ್ರನಿಗೆ ತಿಳಿಸಿದ ಸಂತ್ರಸ್ತ 4 ಗಂಟೆಗೆ ಮನೆಯಿಂದ ಹೊರಟು, 15 ಕಿಮೀ ದೂರದ ಅಮೀರ್‌ಪೇಟ್‌ನ ಲಾಡ್ಜ್‌ಗೆ ಹೋಗಿದ್ದರು. ಈ ವೇಳೆ ಖಾತೆ ಪರಿಶೀಲನೆಗಾಗಿ ಹಣ ಪಾವತಿಸುವಂತೆ ಸೂಚಿಸಲಾಯಿತು.ಭಾನುವಾರ ಮುಂಜಾನೆ 4ರ ಹೊತ್ತಿಗೆ ವೀಡಿಯೋ ಕರೆ ಇದ್ದಕ್ಕಿದ್ದಂತೆ ಕಡಿತಗೊಂಡಿದ್ದು, ಕೂಡಲೇ ಸಂತ್ರಸ್ತ ಸಮಯ ಸಾಧಿಸಿ ಹೈದರಾಬಾದ್‌ನ ಸೈಬರ್ ಅಪರಾಧ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಈ ವೇಳೆ ತಾನು ವಂಚನೆಗೆ ಒಳಪಟ್ಟದ್ದನ್ನು ಅವರು ಮನಗಂಡಿದ್ದಾರೆ.