: ಮಾಲಿನ್ಯ ತಗ್ಗಿಸುವಿಕೆ ಮತ್ತು ಇಂಧನಕ್ಕಾಗಿ ಅನ್ಯ ದೇಶಗಳ ಮೇಲಿನ ಅವಲಂಬನೆ ಕಡಿತದ ಗುರಿಯೊಂದಿಗೆ, 10 ಬೋಗಿಗಳ ಹೈಡ್ರೋಜನ್ ರೈಲಿಗೆ ರೈಲ್ವೆ ಸಚಿವಾಲಯ ಒಪ್ಪಿಗೆ ನೀಡಿದೆ.
ಪರಿಸರ ಸ್ನೇಹಿ । ಗಂಟೆಗೆ 75 ಕಿ.ಮೀ. ವೇಗದ ಸಾಮರ್ಥ್ಯ
10 ಬೋಗಿ । 2600 ಪ್ರಯಾಣಿಕರ ಹೊತ್ತೊಯ್ಯುವ ಶಕ್ತಿನವದೆಹಲಿ: ಮಾಲಿನ್ಯ ತಗ್ಗಿಸುವಿಕೆ ಮತ್ತು ಇಂಧನಕ್ಕಾಗಿ ಅನ್ಯ ದೇಶಗಳ ಮೇಲಿನ ಅವಲಂಬನೆ ಕಡಿತದ ಗುರಿಯೊಂದಿಗೆ, 10 ಬೋಗಿಗಳ ಹೈಡ್ರೋಜನ್ ರೈಲಿಗೆ ರೈಲ್ವೆ ಸಚಿವಾಲಯ ಒಪ್ಪಿಗೆ ನೀಡಿದೆ. ಹರ್ಯಾಣದ ಜಿಂದ್ ಮತ್ತು ಸೋನಿಪತ್ ನಡುವೆ ಓಡಲಿರುವ ಇದು, ದೇಶದ ಮೊದಲ ಸಂಪೂರ್ಣ ಹೈಡ್ರೋಜನ್ ಚಾಲಿತ ರೈಲು ಎನಿಸಿಕೊಳ್ಳಲಿದೆ. ಜತೆಗೆ, ಇಂತಹ ಯತ್ನ ನಡೆಸುತ್ತಿರುವ ಜರ್ಮನಿ, ಜಪಾನ್, ಚೀನಾ, ಅಮೆರಿಕದ ಪಟ್ಟಿಗೆ ಭಾರತವನ್ನು ಸೇರಿಸಲಿದೆ.
1.2 ಮೆಗಾವ್ಯಾಟ್ ಸಾಮರ್ಥ್ಯದ ಎಂಜಿನ್ ಹೊಂದಲಿರುವ ಈ ರೈಲು, ಗಂಟೆಗೆ 75 ಕಿ.ಮೀ. ವೇಗದಲ್ಲಿ ಚಲಿಸಲಿದೆ. 10 ಬೋಗಿಗಳನ್ನು ಹೊಂದಿರುವ ರೈಲು ಒಮ್ಮೆಗೆ 2600 ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿರಲಿದೆ.ಓಡೋದು ಹೇಗೆ?:
ಈ ರೈಲಿಗೆ ಇಂಧನವಾಗಿರುವ ಹೈಡ್ರೋಜನ್ ಅನ್ನು ಪೂರೈಸಲು ಈಗಾಗಲೇ ಜಿಂದ್‌ನಲ್ಲಿ ಸಂಗ್ರಹಣೆ ಮತ್ತು ಇಂಧನ ತುಂಬುವ ಘಟಕವನ್ನು ನಿರ್ಮಿಸಲಾಗಿದೆ. ಇಲ್ಲಿಂದ ತುಂಬಿಸಿಕೊಳ್ಳಲಾದ ಹೈಡ್ರೋಜನ್, ಎಂಜಿನ್‌ನ ಒಳಗೆ ರಾಸಾಯನಿಕ ಪ್ರಕ್ರಿಯೆಗೆ ಒಳಪಡುತ್ತದೆ ಹಾಗೂ ಅದರಿಂದ ವಿದ್ಯುತ್ ಉತ್ಪಾದನೆಯಾಗಿ ರೈಲು ಓಡುತ್ತದೆ. ಈ ವೇಳೆ ನೀರಿನ ಆವಿಯನ್ನಷ್ಟೇ ಅದು ಹೊರಬಿಡುವ ಕಾರಣ ಯಾವುದೇ ಮಾಲಿನ್ಯಕ್ಕೆ ಅವಕಾಶವೇ ಇರದು. ಕಾರ್ಯಾಚರಣೆ ಆರಂಭವಾದ ಹೊಸತರಲ್ಲಿ ರೈಲಿನಲ್ಲಿ ತಾಂತ್ರಿಕ ಸಿಬ್ಬಂದಿಯೂ ಪ್ರಯಾಣಿಸಲಿದ್ದು, ಅದರ ಕಾರ್ಯನಿರ್ವಹಣೆಯನ್ನು ಪರಿಶೀಲಿಸಲಿದ್ದಾರೆ. ಇದಕ್ಕಾಗಿ ನುರಿತ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ.ಅತ್ತ ಹೈಡ್ರೋಜನ್ ಉತ್ಪಾದನೆ, ಸಂಗ್ರಹಣೆ ಮತ್ತು ವಿತರಣಾ ಘಟಕಗಳಲ್ಲಿ ಸೋರಿಕೆ ಮತ್ತು ಜ್ವಾಲೆಯನ್ನು ಪತ್ತೆ ಮಾಡುವ ಉಪಕರಣಗಳ ಅಳವಡಿಕೆ ಸೇರಿದಂತೆ ವಿವಿಧ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.